Advertisement

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

12:26 AM Jul 19, 2024 | Team Udayavani |

ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಿನವಿಡೀ ಬಿರುಸಿನ ಮಳೆಯಾಗಿದೆ. ಪರಿಣಾಮ ಕೆಲವು ಕಡೆ ಹಾನಿ ಸಂಭವಿಸಿದೆ.

Advertisement

ಸತತ ಮಳೆಯಿಂದಾಗಿ ಜೀವನದಿಗಳು ತುಂಬಿ ಹರಿಯುತ್ತಿದೆ. ತುಂಬೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡ ಕಾರಣ ಅಣೆಕಟ್ಟಿನ ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ. ಮಂಗಳೂರಿ ನಲ್ಲೂ ಬಿರುಸಿನ ಮಳೆಯಾಗಿದೆ.

ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಸುರಿದ ಭಾರೀ ಗಾಳಿ ಮಳೆಗೆ ಪಡೀಲ್‌ ಕಣ್ಣೂರು ಸಮೀಪದ ಬಳ್ಳೂರು ಗುಡ್ಡದಲ್ಲಿ ಮತ್ತೆ ಕುಸಿತವಾಗಿದ್ದು, ಕೆಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತಷ್ಟು ಕುಸಿಯಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಭಾಗದ ಹಲವು ಮನೆಗಳಿಗೆ ಸಂಪರ್ಕಿಸುವ ಕಾಲುದಾರಿ ಕುಸಿದಿದ್ದು, ಶಾಲಾ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಅತಂತ್ರರಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇಂದು ರೆಡ್‌, ಆರೆಂಜ್‌ ಅಲರ್ಟ್‌
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.19ರ ಬೆಳಗ್ಗೆ 8.30ರ ವರೆಗೆ ರೆಡ್‌ ಅಲರ್ಟ್‌, ಬಳಿಕ ಜು. 20 ಬೆಳಗ್ಗೆ 8.30ರ ವರೆಗೆ ಕರಾವಳಿ ಭಾಗದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬಿರುಸಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಜು.21 ಮತ್ತು 22ರಂದು ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಘಾಟಿಯಲ್ಲಿ ಗುಡ್ಡ ಕುಸಿತ
ಶಿರಾಡಿ ಘಾಡಿಯಲ್ಲಿ ಬುಧವಾರ ರಾತ್ರಿ ಗುಡ್ಡ ಕುಸಿತದ ಪರಿಣಾಮ ಬೆಂಗಳೂರು ಕಡೆಯಿಂದ ಹೊರಟ ಬಸ್‌ಗಳು ಹಾಗೂ ಇತರ ವಾಹನಗಳು ಶಿರಾಡಿಯಲ್ಲೇ ಬಾಕಿಯಾಗಿದ್ದವು. ಮಣ್ಣು ತೆರವು ಕಾರ್ಯಾಚರಣೆ ಬಳಿಕ ಸುಮಾರು ವಾಹನ ಸಂಚಾರ ಆರಂಭಗೊಂಡಿತ್ತು. ಗುರುವಾರ ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರು ತಲುಪಬೇಕಾದ ಬಸ್‌ಗಳು ಸುಮಾರು 9 ಗಂಟೆಗೆ ತಲುಪಿತು.

Advertisement

ಹಾಸನ-ಮಾರನಹಳ್ಳಿಯವರೆಗೂ ಗುಡ್ಡ ಕುಸಿತ ಉಂಟಾದ ಕಾರಣ ಜು.18ರಿಂದ ರಸ್ತೆ ದುರಸ್ತಿ ಮುಗಿಯುವವರೆಗೆ ಎಲ್ಲ ರೀತಿಯ ವಾಹನ ನಿಷೇಧಿಸಿ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next