ಉಡುಪಿ: ಮಳೆಹಾನಿ ಪ್ರದೇಶಕ್ಕೆ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ, ದ.ಕ., ಉ.ಕ. ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಜತೆ ಮಳೆ ಹಾನಿಯ ಕುರಿತ ಪರಿಶೀಲನೆ ಸಭೆ ನಡೆಸಿದರು.
ಗದ್ದೆಗಳಲ್ಲಿ ನೀರು ತುಂಬಿಕೊಂಡು ಹಾನಿಗೊಳಗಾಗಿರುವ ಬೆಳೆ ಹಾನಿ ಸಮೀಕ್ಷೆಯನ್ನು 2 ದಿನ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯನ್ನು 10 ದಿನಗಳ ಒಳಗಾಗಿ ಅಂದಾಜಿಸಿ ಪರಿಹಾರ ನೀಡಬೇಕು. ವಿದ್ಯುತ್ ಪೂರ್ಣ ಪ್ರಮಾಣದಲ್ಲಿ ಒದಗಿಸುವ ಜತೆಗೆ ಗಾಳಿ ಮಳೆಯಿಂದ ಹಾನಿ ಗೊಳಗಾದ ಕಂಬಗಳ ಪುನರ್ ಸ್ಥಾಪನೆ 2 ದಿನದಲ್ಲಿ ಆಗಬೇಕು ಎಂದರು.
ಮಳೆಯಿಂದ ಹಾನಿಗೊಳಗಾದ ರೈತರು ಹಾಗೂ ಬಡ ಜನರಿಗೆ ಪರಿ ಹಾರ ಸೌಲಭ್ಯಗಳನ್ನು ಸಂಬಂ ಧಿಸಿದ ಇಲಾಖೆಗಳು ಶೀಘ್ರ ತಲು ಪಿಸ ಬೇಕು. ಮನೆಹಾನಿ, ಗುಡ್ಡ ಕುಸಿತ, ಮೂಲಸೌಕರ್ಯಗಳ ಹಾನಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆಗೆ ಸ್ಪಂದಿಸುವ ಸ್ವಯಂಸೇವಕರಿಗೆ ಅಪದಮಿತ್ರ ಯೋಜನೆಯಡಿ ತರಬೇತಿ ಒದಗಿಸಿ, ಸುರಕ್ಷ ಸಾಧನಗಳ ಕಿಟ್ ವಿತರಿಸಬೇಕು. ಅವರ ಸುರಕ್ಷೆಗೆ 5 ಲಕ್ಷ ರೂ. ವರೆಗಿನ ಜೀವವಿಮೆ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕರಾವಳಿ ಭಾಗದಲ್ಲಿ ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಹೆದ್ದಾರಿ, ರಕ್ಷಣ ಇಲಾಖಾ ಕಾಮಗಾರಿ ಗಳಿಂದ ಜನ ಸಾಮಾನ್ಯರ ದೈನಂದಿನ ಕಾರ್ಯಗಳಿಗೆ ಹೆಚ್ಚಿನ ಅನನು ಕೂಲಗಳು ಉಂಟಾಗುತ್ತಿರುವ ಬಗ್ಗೆ ದೂರುಗಳಿವೆ. ಇವುಗಳನ್ನು ಬಗೆಹರಿಸಲು ಸರಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ನಡೆಸಿ, ಸಮಸ್ಯೆಗಳನ್ನು ಸರಿ ಪಡಿಸಬೇಕು ಎಂದು ಬೊಮ್ಮಾಯಿ ಅವರು ನಿರ್ದೇಶಿಸಿದರು.