Advertisement
ಈ ಮಳೆಗಾಲದಲ್ಲಿ ಈವರೆಗೆ ಸುರಿದ ಮಳೆಯ ಪೈಕಿ ಸೋಮವಾರವೇ ಅತಿ ಹೆಚ್ಚಾಗಿತ್ತು. ಕೊಲಾಬಾ ಅಬ್ಸರ್ವೇಟರಿ ದಾಖಲೆಯ ಪ್ರಕಾರ 24 ಗಂಟೆಗಳಲ್ಲಿ 170.6 ಮಿ.ಮೀ ಮಳೆ ಸುರಿದಿದೆ. ಮುಂಬಯಿನ ಬಹುತೇಕ ರಸ್ತೆಗಳಲ್ಲಿ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಗಳ ಗುಂಡಿಗಳೂ ವಾಹನ ಸಂಚಾರರಿಗೆ ಇನ್ನಷ್ಟು ಭೀತಿ ಮೂಡಿಸಿವೆ. ಸೋಮವಾರ ಮುಂಬಯಿಯ ಎಲ್ಲ ಶಾಲೆಗಳಿಗೆ ರಜೆ ನೀಡಲಾಗಿದ್ದು, ಪರೀಕ್ಷೆಗಳನ್ನೂ ಮುಂದೂಡಲಾಗಿದೆ.ಕುರ್ಲಾ, ಸಿಯೋನ ಮತ್ತು ದಾದರ್, ಮೀರಾ ರೋಡ್, ನಲ್ಲಸೋಪಾರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನಿಂತಿದೆ. ಮಂಗಳವಾರವೂ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಕಲಾಪಕ್ಕೂ ಮಳೆ ಅಡ್ಡಿ: ನಾಗ್ಪುರದಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನಕ್ಕೂ ಮಳೆ ಬಾಧಿಸಿತು. ಕಳೆದ ವಾರ ಭಾರಿ ಮಳೆಯಿಂದಾಗಿ ವಿಧಾನಸಭೆ ಕಟ್ಟಡದೊಳಕ್ಕೆ ನೀರು ನುಗ್ಗಿದ ಪ್ರಕರಣದ ತನಿಖೆ ನಡೆಸಲು ಆದೇಶಿಸಲಾಗಿದೆ. ಶುಕ್ರವಾರ ವಿದ್ಯುತ್ ಅಭಾವದಿಂದಾಗಿ ಕಲಾಪವೂ ಮುಂದೂಡಿಕೆಯಾಗಿತ್ತು.
ಬೃಹನ್ಮುಂಬಯಿ ಸಾರಿಗೆ ಸಂಸ್ಥೆಯ ಬಸ್‌ಗಳು ವಿಪರೀತ ಮಳೆಯ ಮಧ್ಯೆಯೂ ಸಂಚರಿಸುತ್ತಿವೆ. ಆದರೆ ಯಾವ ಬಸ್‌ಗಳೂ ಸಮಯಕ್ಕೆ ಸರಿಯಾಗಿ ಸಾಗುತ್ತಿಲ್ಲ. ಇನ್ನೊಂದೆಡೆ ಸಬರ್ಬನ್ ರೈಲುಗಳೆಲ್ಲವೂ 15 ರಿಂದ 20 ನಿಮಿಷಗಳಷ್ಟು ವಿಳಂಬವಾಗಿ ಓಡಾಡುತ್ತಿವೆ. ಗುಜರಾತ್ ಹಾಗೂ ಇತರೆಡೆಯಿಂದ ಆಗಮಿಸುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ದಾದರ್, ಮಾತುಂಗಾ ರಸ್ತೆ, ಗೋರೆಗಾಂವ್ ಹಾಗೂ ಇತರ ಸ್ಥಳಗಳಲ್ಲಿ ರೈಲು ಟ್ರ್ಯಾಕ್‌ಗಳಿಂದ ನೀರು ಹೊರಹಾಕಲು ಭಾರಿ ಪ್ರಮಾಣ ನೀರೆತ್ತುವ ಪಂಪ್‌ಗ್ಳನ್ನು ಬಳಸಲಾಗುತ್ತಿದೆ. ಇನ್ನು ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಆದರೆ ಎಲ್ಲ ವಿಮಾನಗಳೂ ಎಂದಿನಂತೆ ಹಾರಾಡುತ್ತಿವೆ.
Related Articles
Advertisement
ಇಂಟರ್‌ನೆಟ್‌ನಲ್ಲಿ ಜೋಕ್‌ಗಳು: ಕಳೆದ ವಾರಪೂರ್ತಿ ಮಳೆಯಿಂದ ಅನಾಹುತಗಳನ್ನೇ ಕೇಳಿದ ಜನರು ಶನಿವಾರದಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಮನೆಯಲ್ಲೇ ಕುಳಿತು ಇಂಟರ್‌ನೆಟ್‌ನಲ್ಲಿ ಜೋಕ್‌ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಟ್ವಿಟರ್‌ನಲ್ಲಂತೂ ಜೋಕ್‌ಗಳು ಸುರಿಮಳೆಯೇ ಹರಿದಿದೆ.