Advertisement

ಅಕಾಲಿಕ ಮಳೆ: ರೈತರಲ್ಲಿ ಆತಂಕ

06:13 PM Oct 16, 2020 | Suhan S |

ಶೃಂಗೇರಿ: ಕಳೆದ 2-3 ದಿನದಿಂದ ಮಲೆನಾಡು ಭಾಗಗಳಲ್ಲಿ ಮಳೆಯ ಕಾಟದಿಂದ ಅಡಕೆ ಕೊಯ್ಲು ಕಾರ್ಯಕ್ಕೆ ತೀವ್ರ ತೊಂದರೆಯಾಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ. ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆಯಾಗದೆ ಇದೀಗ ಅಕಾಲಿಕ ಮಳೆಯಿಂದ ಕೃಷಿ-ಕಾರ್ಯಕ್ಕೆ ಹಿನ್ನಡೆಯಾಗಿದೆ.

Advertisement

ಈ ವರ್ಷ ಆಶ್ಲೇಷ ಮಳೆಯ ಆರ್ಭಟ ತಾಲೂಕಿನಲ್ಲಿ ಜೊರಾಗಿಯೇ ಇತ್ತು. ಪ್ರವಾಹ ಇಳಿಕೆಯಾಗದೆ 4-5ದಿನ ಹಾಗೆಯೇ ಮುಂದುವರಿದಿತ್ತು. ನಂತರ ಉತ್ತರಾ ಮಳೆಯೂ ಜೋರಾಗಿಯೇ ಬಂದಿದ್ದು, ಪ್ರವಾಹ ಕಂಡಿತ್ತು. ಆದರೆ ದೊಡ್ಡ ಮಳೆಗಳಾದ ಪುನರ್ವಸು ಹಾಗೂ ಪುಷ್ಯ ಮಳೆ ಬರಲೇ ಇಲ್ಲ.ಇದೀಗ ಚಂಡಮಾರುತದ ಹಾವಳಿಯಿಂದ ಜಿಟಿ-ಜಿಟಿ ಮಳೆ ಎಡೆಬಿಡದೆ ತಾಲೂಕಿನಲ್ಲಿ ಸುರಿಯುತ್ತಿದೆ.

ಅಡಕೆ ಕೊಯ್ಲಿಗೆ ಅಡ್ಡಿ: ತಾಲೂಕಿನಲ್ಲಿ ಸುಮಾರು 2,100 ಎಕರೆ ಅಡಕೆ ತೋಟಗಳಿದ್ದು, ಅಡಕೆ ಬೆಳೆಗಾರರು ಈ ವರ್ಷ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅಕಾಲಿಕ ಮಳೆಯಿಂದಾಗಿ ಉತ್ತಮ ಗುಣಮಟ್ಟದ ಅಡಕೆ ತಯಾರಿಸಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಅಡಕೆ ತೋಟದಲ್ಲಿ ಅಡಕೆ ಕಾಯಿಗಳು ಬಲಿತಿದ್ದು, ಕೊಯ್ಲು ಮಾಡಲು ಸರಿಯಾದ ಸಮಯವಾಗಿದೆ. ಆದರೆ ಬಿಸಿಲಿನ ವಾತಾವರಣ ಇಲ್ಲದೆ ಕೊಯ್ಲು ಮಾಡಲು ತೀವ್ರತೊಂದರೆಯಾಗಿದೆ. ತಾಲೂಕಿನಲ್ಲಿ ಕೆಲೆವೆಡೆ ಅಡಕೆ ಕೊಯ್ಲು ಪ್ರಾರಂಭವಾಗಿದೆ. ಬೇಯಿಸಿದ ಅಡಕೆ ಒಣಗಿಸಲಾಗದೆ ಮನೆಯೊಳಗಿಲ್ಲಾ ಹರಡಿಕೊಂಡು ಬಿಸಿಲಿನ ನಿರೀಕ್ಷೆಯಲ್ಲಿದ್ದಾರೆ.

ಚಪ್ಪರದಲ್ಲಿ ಹರಡಿದ್ದ ಅಡಕೆ ರಾಶಿ ಹಾಕಿ ಟಾರ್ಪಲ್‌ ಮುಚ್ಚಿ ಕುಳಿತ್ತಿದ್ದಾರೆ. ಇನ್ನೆರಡು ದಿನ ಇದೇ ವಾತಾವರಣ ಮುಂದುವರಿದರೆ ಸಂಸ್ಕರಿತ ಅಡಕೆ ಶಿಲೀಂದ್ರ ಬಾಧೆಗೆ ಒಳಗಾಗಿಹೂವಾಗುವ ಆತಂಕ ಎದುರಾಗಿದೆ. ಹೊಗೆಹಟ್ಟಿ, ಡ್ರೈಯರ್‌ಗಳಲ್ಲಿ ಒಣಗಿಸಿದ ಅಡಕೆಗೆ ಮಾರುಕಟ್ಟೆಯಲ್ಲೂ ಉತ್ತಮ ಧಾರಣೆ ದೊರೆಯದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ಬೆಳೆಗಾರನ ಸ್ಥಿತಿ. ಕೊಯ್ಲು ವಿಳಂಬವಾದಂತೆಲ್ಲ ಅಡಕೆ ಹಣ್ಣಾಗುತ್ತಿರುವುದು ಒಂದೆಡೆಯಾದರೆ ಬಲಿತ ಅಡಕೆ ಕಾಯಿಗೆ ಕೊಳೆರೋಗ ಬರುವ ಸಾಧ್ಯತೆ ಇದೆ.

ಒಂದೆಡೆ ಕಾರ್ಮಿಕರ ಕೊರತೆ ಮತ್ತೂಂದೆಡೆ ವಾತಾವರಣ ತೊಂದರೆಯಿಂದಾಗಿ ಸಣ್ಣ ರೈತರ ಪಾಡು ಹೇಳತೀರದಾಗಿದೆ. ಒಣಗದೇ ಇರುವ ಅಡಕೆ ಕಣ್ಣೆದುರೇ ಹಾಳಾಗುತ್ತಿದೆ. ಹಣ್ಣಾದ ಅಡಕೆ ಒಣಗಲು ಹಾಕಿದಲ್ಲಿಯೇ ಮೊಳಕೆಯೊಡೆಯುತ್ತಿದೆ. ಒಟ್ಟಾರೆ ರೈತರ ಬದುಕು ಸಂಕಷ್ಟ ಗೂಡಾಗುವುದರಲ್ಲಿ ಸಂಶಯವೇ ಇಲ್ಲ.-ಹಂಚಲಿ ಕೃಷ್ಣಮೂರ್ತಿ ರಾವ್‌, ಕೃಷಿಕ

Advertisement

ಅಡಿಕೆಗೆ ಈ ವರ್ಷ ಉತ್ತಮ ಧಾರಣೆ ಇದೆ ಇಲ್ಲಿನ ಮ್ಯಾಮ್ಕೋಸ್‌ ಸಂಸ್ಥೆಯಲ್ಲಿ ಹೊಸ ಅಡಕೆ 41,900 ರಿಂದ 65,899, ಬೆಟ್ಟೆ 37,069 ರಿಂದ 38,519, ಗೊರಬಲು 23,516 ರಿಂದ 28,998 ರಾಶಿ ಇಡಿ 36,058 ರಿಂದ 37,899ರವರೆಗೆ ಧಾರಣೆ ಇದೆ. ಕಳೆದ ವರ್ಷ ಮ್ಯಾಮ್ಕೋಸ್ ಶಾಖೆಗೆ 15 ಸಾವಿರಕ್ಕೂ ಹೆಚ್ಚು ಅಡಕೆ ಮೂಟೆಗಳು ಬಂದಿದ್ದು, ಈ ವರ್ಷ ಅಡಕೆ ಫಸಲು ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ತಾಲೂಕಿನಲ್ಲಿ ಹಳದಿ ಎಲೆ ರೋಗದಿಂದ ಬೆಂಡಾಗಿದ್ದು, ಒಟ್ಟಾರೆ ಅಡಕೆಯ ಫಸಲು ಕಡಿಮೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.  -ಎ. ಸುರೇಶ್‌ಚಂದ್ರ, ಅಂಬಳೂರು, ನಿರ್ದೇಶಕ ಮ್ಯಾಮ್ಕೋಸ್‌

Advertisement

Udayavani is now on Telegram. Click here to join our channel and stay updated with the latest news.

Next