Advertisement
ಗೋವಾ ಬೆಳಗಾವಿ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆಯಲ್ಲಿ ಅಕೇಶಿಯಾ ಮರ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಲ್ಪೈ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಚೋರ್ಲಾ ಘಾಟ್‍ನಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಸೋಮವಾರ ತಡರಾತ್ರಿ ಪಾಡೇಲಿಯ ಸರಕಾರಿ ಶಾಲೆಯ ಬಳಿ ವಿದ್ಯುತ್ ತಂತಿಗಳ ಮೇಲೆ ಆಲದ ಮರ ಬಿದ್ದು ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಈ ಮರ ಬಿದ್ದು ಕೆಲ ಕಾಲ ಈ ಭಾಗದ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು. ವಾಲ್ಪೈ ಅಗ್ನಿಶಾಮಕ ದಳ ಮತ್ತು ವಿದ್ಯುತ್ ಇಲಾಖೆಯು ಭಾರೀ ಮಳೆಯ ಸಮಯದಲ್ಲೆ ದುರಸ್ತಿ ಮಾಡುವ ಮೂಲಕ ವಿದ್ಯುತ್ ಸರಬರಾಜು ಸುಮಗಗೊಳಿಸಿದರು.
ಗೋವಾ ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. ಮಳೆ ಮುಂದುವರಿದರೆ ನೀರಿನ ಮಟ್ಟ ಹೆಚ್ಚಿ ಪ್ರವಾಹ ಉಂಟಾಗಲಿದೆ. ಕೆಲವೆಡೆ ರಸ್ತೆಯ ಚರಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ರಸ್ತೆ ಜಲಾವೃತವಾಗಿತ್ತು. ಈಗಾಗಲೇ ಈ ಸತ್ತರಿ ತಾಲೂಕಿನ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜನತೆ ಆತಂಕಕ್ಕೊಳಗಾಗಿದ್ದಾರೆ.