ದಾವಣಗೆರೆ: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಒಟ್ಟು 9.10 ಲಕ್ಷ ರೂಪಾಯಿ ಮೌಲ್ಯದ ಬೆಳೆ, ಆಸ್ತಿಗೆ ಹಾನಿಯಾಗಿದೆ.
ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಮಂಗಳವಾರ ರಾತ್ರಿ 11 ಗಂಟೆಯವರೆಗೆ ಮಳೆಯ ಸೂಚನೆಯೇ ಇರಲಿಲ್ಲ. ಮಿಂಚು, ಗುಡುಗಿನೊಂದಿಗೆ ಏಕಾಏಕಿ ಮಳೆ ಪ್ರಾರಂಭವಾಯಿತು. ಸಿಡಿಲಿನ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಧೋ ಎಂದು ಮಳೆ ಸುರಿಯಿತು. ಮಳೆಯ ಆರ್ಭಟ ಜೋರಾಗಿತ್ತು. ಕೆಲವು ಕಡೆ ಜನರು ಮಳೆ ನೀರು ನುಗ್ಗಿದ್ದರಿಂದ ತೊಂದರೆ ಅನುಭವಿಸಿದರು. ಕೆಲವಡೆ ಮರ-ಗಿಡಗಳು ಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಕೆಲವೆಡೆ ತೀವ್ರ ಸಮಸ್ಯೆ ಉಂಟಾಗಿತ್ತು. ತಗ್ಗು ಪ್ರದೇಶಗಳ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು. ಡಿಸಿಎಂ ಟೌನ್‌ಶಿಪ್ ಸೇರಿದಂತೆ ವಿವಿಧೆಡೆ ಟಿವಿ, ಫ್ರಿಜ್ ಸೇರಿದಂತೆ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.
ಬೇಸಿಗೆ ಕಾಲದಲ್ಲೇ ಪ್ರತಿ ದಿನ ಮಳೆ ಸುರಿಯುತ್ತಿದೆ. ಬೆಳಗಿನ ವೇಳೆ ಜನರು ಬಿಸಿಲ ಧಗೆಯಿಂದ ತತ್ತರಿಸಿ ಹೋಗುತ್ತಿದ್ದಾರೆ. ಮಳೆಗಾಲದ ಪ್ರಾರಂಭಕ್ಕೂ ಮುನ್ನವೇ ಅಶ್ವಿನಿ ಮಳೆ ಆಗುತ್ತಿರುವುದು ಜನರ ಅದರಲ್ಲೂ ಮುಖ್ಯವಾಗಿ ರೈತಾಪಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಶ್ವಿನಿ ಮಳೆ ಬಂದರೆ ಮುಂದೆ ಮಳೆ ಹೆಚ್ಚಾಗಿ ಆಗುವುದಿಲ್ಲ ಎಂಬ ನಂಬಿಕೆ ಈಗಲೂ ಇರುವುದರಿಂದ ಕೃಷಿಕರು ಚಿಂತಿತರಾಗಿದ್ದಾರೆ. ಭಾರೀ ಮಳೆಯಿಂದ ಭತ್ತದ ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆ, ಗಾಳಿಗೆ ಭತ್ತ ನೆಲ ಕಚ್ಚುತ್ತಿದೆ. ದಾವಣಗೆರೆ ತಾಲೂಕಿನಲ್ಲಿ 153 ಎಕರೆಯಲ್ಲಿನ ಭತ್ತ ಹಾಳಾಗಿದೆ. ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಭಾಗಶಃ ಹಾನಿಯಾಗಿದೆ. 153 ಎಕರೆ ಪ್ರದೇಶ ಭತ್ತದ ಬೆಳೆ ಹಾನಿಯಾಗಿದ್ದು ಒಟ್ಟು 5.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ನ್ಯಾಮತಿ ತಾಲೂಕಿನಲ್ಲಿ 2 ಎಕರೆ ಬಾಳೆ ಮತ್ತು 1 ಎಕರೆ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿ ಒಟ್ಟು 2 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ ತಾಲೂಕಿನಲ್ಲಿ 2 ಕಚ್ಚಾ ಮನೆಗೆ ಹಾನಿಯಾಗಿದೆ. 2 ಎಕರೆ ಬಾಳೆ ಬೆಳೆಗೆ ಹಾನಿಯಾಗಿ ಒಟ್ಟು 1.80 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 9.10 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನಲ್ಲಿ 3 ಮಿಮೀ ವಾಡಿಕೆ ಮಳೆಗೆ 10 ಮಿಮೀ ಮಳೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 1 ಮಿಮೀ ವಾಡಿಕೆ ಮಳೆಗೆ 20 ಮಿಮೀ, ಹರಿಹರದಲ್ಲಿ 13 ಮಿಮೀ ಮಳೆಯಾಗಿದೆ. ಹೊನ್ನಾಳಿಯಲ್ಲಿ 1 ಮಿಮೀ ವಾಡಿಕೆ ಮಳೆಗೆ 10 ಮಿಮೀ ಮಳೆಯಾಗಿದೆ. ಜಗಳೂರಿನಲ್ಲಿ 10 ಮಿಮೀ ಮಳೆಯಾಗಿದೆ. ನ್ಯಾಮತಿಯಲ್ಲಿ ವಾಡಿಕೆ ಮಳೆ 1 ಮಿ.ಮೀ ಇದ್ದು 11.00 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸರಾಸರಿ 1 ಮಿಲಿ ಮೀಟರ್ ವಾಡಿಕೆ ಮಳೆಗೆ 12ಮಿಲಿ ಮೀಟರ್ ಮಳೆಯಾಗಿದೆ.