Advertisement
ನದಿಗಳ ಅಬ್ಬರ ಪರಾಕಾಷ್ಠೆ ಮುಟ್ಟಿದೆ. ರಸ್ತೆಗಳು ನದಿಗಳಾಗಿ ಬದಲಾಗಿವೆ. ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಲಾಶಯಗಳು ಭೋರ್ಗರೆಯುತ್ತಿವೆ. ನದಿ ಪಾತ್ರದ ಜನರಲ್ಲಿ ಕ್ಷಣಕ್ಷಣಕ್ಕೂ ಆತಂಕ ಗಂಭೀರವಾಗುತ್ತಿದೆ.
Related Articles
Advertisement
ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಬೀಳುತ್ತಲೇ ಇದ್ದು ಎಲ್ಲ ಜಲಾಶಯಗಳು ಭರ್ತಿಯಾಗಿವೆ. ರಾಜಾಪುರ ಬ್ಯಾರೇಜ್‌ದಿಂದ 2,52,585 ಕ್ಯೂಸೆಕ್ ಹಾಗೂ ದೂಧಗಂಗಾ ನದಿಯಿಂದ 42,240 ಕ್ಯೂಸೆಕ್ ಸೇರಿದಂತೆ ಕೃಷ್ಣಾ ನದಿಗೆ ಈಗ ಒಟ್ಟು 2,94,825 ಕ್ಯೂಸೆಕ್ ನೀರು ಬರುತ್ತಿದೆ. ಮುಖ್ಯವಾಗಿ 105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದ್ದು ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಬಿಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 599 ಮನೆಗಳು ಭಾಗಶಃ ಹಾನಿಗೊಳಗಾಗಿದ್ದರೆ ಒಂದು ಮನೆ ಸಂಪೂರ್ಣ ಕುಸಿದಿದೆ. ಆರು ಜಾನುವಾರುಗಳು ಸಾವನ್ನಪ್ಪಿವೆ. 80,590 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ.
ಹೆದ್ದಾರಿ ಸಂಪರ್ಕ ಕಡಿತ: ಮಹಾರಾಷ್ಟ್ರದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಕೊಲ್ಲಾಪುರ ಹಾಗೂ ಕರ್ನಾಟಕದ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರಸ್ತೆಯ ಮೇಲೆ ಭಾರೀ ಪ್ರಮಾಣದ ನೀರು ಹಾಗೂ ಭೂ ಕುಸಿತದ ಕಾರಣ ಬೆಳಗಾವಿಯಿಂದ ಕೊಲ್ಲಾಪುರದವರೆಗೆ ಮುಂದಿನ 24 ಗಂಟೆಗಳ ಕಾಲ ರಸ್ತೆ ಸಂಚಾರ ನಿಷೇಧಿಸಲಾಗಿದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ವಾಹನಗಳ ಮಾಲೀಕರು ರಸ್ತೆ ದಾಟುವ ಸಾಹಸಕ್ಕೆ ಮುಂದಾಗಬಾರದು ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ತಿಳಿಸಿದ್ದಾರೆ. ಇದಲ್ಲದೇ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳಗಾವಿ ತಾಲೂಕಿನಲ್ಲಿ ಮಾರ್ಕಂಡೇಯ ನದಿಯ ಪ್ರವಾಹದಿಂದ ಬೆನಕನಹಳ್ಳಿ ರಸ್ತೆ, ಬೆಳಗುಂದಿ-ರಕ್ಕಸಕೊಪ್ಪ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸಂಪರ್ಕ ಕಳೆದುಕೊಂಡ ಖಾನಾಪುರ: ಖಾನಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಇದರಿಂದ ಬಹುತೇಕ ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ. ಮುಖ್ಯವಾಗಿ ಖಾನಾಪುರ-ಗೋವಾ, ಖಾನಾಪುರ-ಬೆಳಗಾವಿ ರಸ್ತೆಗಳ ಮೇಲೆ ನೀರು ಬಂದಿರುವುದರಿಂದ ಇಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಚೋರ್ಲಾ ಬಳಿ ಭೂ ಕುಸಿತ ಉಂಟಾಗಿದ್ದರಿಂದ ಬೆಳಗಾವಿ-ಗೋವಾ ನಡುವಿನ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಖಾನಾಪುರ-ಪಾರಿಶ್ವಾಡ ರಸ್ತೆಯ ಮೇಲೆ ಸಹ ನೀರು ಬಂದು ಸಂಪರ್ಕ ಸ್ಥಗಿತವಾಗಿದೆ. ಲೋಂಡಾದಲ್ಲಿ 25 ಮನೆಗಳು ಜಲಾವೃತವಾಗಿದ್ದು ಈ ಮನೆಯ ಜನರಿಗೆ ಲೋಂಡಾ ರೈಲ್ವೇ ನಿಲ್ದಾಣದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಖಾನಾಪುರ ಹೊರವಲಯದ ಜಮೀನಿನಲ್ಲಿ ಇರುವ ಶಾಸಕಿ ಅಂಜಲಿ ನಿಂಬಾಳಕರ ಅವರ ಮನೆ ಸಹ ಸಂಪೂರ್ಣ ಜಲಾವೃತಗೊಂಡಿದೆ. ಖಾನಾಪುರ -ಪಣಜಿ ರಾಜ್ಯ ಹೆದ್ದಾರಿಯ ಮಲಪ್ರಭಾ ಸೇತುವೆಯ ಮೇಲೆ ಆರು ಅಡಿ ನೀರು ಬಂದಿದೆ. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನಂದಗಡ -ಬೀಡಿ ರಸ್ತೆಯ ಪಕ್ಕದಲ್ಲಿರುವ ಹೊನ್ನಮ್ಮ ದೇವಸ್ಥಾನದ ಎರಡೂ ಬದಿಗಳಿಂದ ಕೆರೆಯು ತುಂಬಿ ಉಕ್ಕಿ ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದಲ್ಲದೆ ಬೀಡಿ -ಹಳಿಯಾಳ, ಬೀಡಿ-ಕಿತ್ತೂರ ಮಧ್ಯದಲ್ಲಿರುವ ತಟ್ಟಿ ಹಳ್ಳದ ಸೇತುವೆಗಳ ಮೇಲೆಯೇ ನೀರು ಹರಿಯುತ್ತಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿರುವ ಕಾರಣ ನೀರು ಗೋಕಾಕ ನಗರದ ಜನವಸತಿ ಸ್ಥಳಗಳಲ್ಲಿ ಜನರು ಪರದಾಡುವಂತಾಗಿದೆ. ನಗರದ ಕುಂಬಾರ ಗಲ್ಲಿ, ಹಾಳಬಾಗ್ ಗಲ್ಲಿ, ಅಂಬಿಗೇರ ಗಲ್ಲಿ, ಬೋಜಗಾರ ಗಲ್ಲಿ ಮತ್ತು ಸ್ಮಶಾನ ಭಾಗದ ಜನ ವಸತಿ ಕೇಂದ್ರಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹಾಳಬಾಗ್ ಗಲ್ಲಿಯಲ್ಲಿ ಹೆಚ್ಚಿನ ಹಾನಿಯಾಗಿದ್ದು ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚಿಸಲಾಗಿದ್ದು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಕುಡಿಯುವ ನೀರು ಸರಬರಾಜು ಸ್ಥಗಿತ: ನಗರದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಹಿಂಡಲಗಾ ಪಂಪ್‌ಹೌಸ್ ನೀರಿನಿಂದ ಆವೃತವಾಗಿದ್ದು ಪಂಪ್ ಚಾಲನೆ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂಡಲಗಾ ಮತ್ತು ರಕ್ಕಸಕೊಪ್ಪ ಪಂಪ್‌ಗ್ಳು ಚಾಲನೆಯಲ್ಲಿಲ್ಲ ಹಾಗೂ ಹಿಡಕಲ್ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ತಲುಪಿರುವುದರಿಂದ ಅಲ್ಲಿ ಸಹ ನೀರೆತ್ತುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕಾರಣ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯು ಹತೋಟಿಗೆ ಬಂದ ನಂತರ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಬೆಳಗಾವಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕ ಕಾರ್ಯ ಪಾಲಕ ಅಭಿಯಂತರು ತಿಳಿಸಿದ್ದಾರೆ.
ಮಲಪ್ರಭಾ: 10 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ: ಮುನವಳ್ಳಿ: ಭಾರಿ ಮಳೆಯಿಂದ ನವಿಲುತೀರ್ಥ ಜಲಾಶಯಕ್ಕೆ 40 ಸಾವಿರ ಕ್ಯೂಸೆಕ್‌ಗಿಂತ ಅಧಿಕ ಒಳಹರಿವು ಇದ್ದು, ಜಲಾಶಯದ ನಾಲ್ಕು ಗೇಟ್‌ಗಳಿಂದ 10 ಸಾವಿರ ಕ್ಯೂಸೆಕ್‌ಕ್ಕೂ ಅಧಿಕ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ನದಿ ಪಾತ್ರದ ಜನತೆ ಜಾಗರೂಕತೆಯಿಂದ ಇರಬೇಕೆಂದು ಸೂಚಿಸಲಾಗಿದೆ. ಮಲಪ್ರಭಾ ಉಗಮಸ್ಥಾನ ಕಣಕುಂಬಿ ಸೇರಿದಂತೆ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆಯಾಗಿ ಭಾರೀ ಪ್ರಮಾಣದಲ್ಲಿ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಸ್ಥಳೀಯ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿಯವರೆಗೆ ಯಾವುದೇ ಹಾನಿ ಉಂಟಾಗಿಲ್ಲ ಮಲಪ್ರಭಾ ಅಣೆಕಟ್ಟಿನ ಗರಿಷ್ಠ ಎತ್ತರ 2079 ಅಡಿ ಇದೆ. ಪ್ರಸ್ತುತ ನೀರಿನ ಪ್ರಮಾಣ 2075.5 ಇದ್ದು, ಮಳೆ ಪ್ರಮಾಣ ಹೀಗೆ ಮುಂದುವರಿದರೆ ಜಲಾಶಯ ಎರಡೇ ದಿನದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಏಳು ಬಾರಿ ಜಲಾಶಯ ಭರ್ತಿಯಾಗಿದ್ದು ಎಂಟನೇ ಸಾರಿಗೆ ಭರ್ತಿಯಾಗಲು ಸಿದ್ಧವಾಗಿದೆ. ಶಾಸಕ ಮಾಮನಿ ಅವಲೋಕನ : ಮಂಗಳವಾರ ಶಾಸಕ ಆನಂದ ಮಾಮನಿ ಮುನವಳ್ಳಿ ಮಲಪ್ರಭಾ ನದಿಪಾತ್ರಕ್ಕೆ ಭೇಟಿ ಕೊಟ್ಟು, ಅವಲೋಕನ ಮಾಡಿದರು. ಹಳೇ ಸೇತುವೆ ಈಗಾಗಲೇ ಮುಳುಗಿದ್ದು, ನದಿ ಪಾತ್ರದ ಜನತೆ ಜಾಗರೂಕರಾಗಿರಬೇಕು. ಅತಿವೃಷ್ಟಿಯಿಂದ ಬೆಳೆ ಹಾನಿ ಹಾಗೂ ಆಸ್ತಿ ಹಾನಿಯಾದರೆ ಕೂಡಲೇ ಸಾರ್ವಜನಿಕರು ಮನವಿ ಸಲ್ಲಿಸಬೇಕೆಂದರು.
•ಕೇಶವ ಆದಿ