ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ಮಧ್ಯರಾತ್ರಿ ಮೂರ್‍ನಾಲ್ಕು ಗಂಟೆ ಸುರಿದ ದಶಕದ ದಾಖಲೆ ಮಳೆಗೆ ನಗರದ ಜನ ತತ್ತರಿಸಿದ್ದಾರೆ. ಕೆಲ ಗಂಟೆ ಸುರಿದ ಕುಂಭದ್ರೋಣ ಮಳೆಗೆ ನಗರದ ಬಹಳಷ್ಟು ಬಡಾವಣೆಗಳ ಜನ ಮಂಗಳವಾರ ಇಡೀ ದಿನ ಪರದಾಡುವಂತಾಯಿತು.
ಹತ್ತಾರು ಬಡಾವಣೆಗಳ ನೂರಾರು ಮನೆಗಳು ಜಲಾವೃತವಾಗಿದ್ದವು. ಪ್ರತಿಷ್ಠಿತ ಬಡಾವಣೆಗಳಾದ ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಶಾಂತಿನಗರ, ಹಲಸೂರು ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ನೀರು ಕಾಲುವೆಗಳು ಉಕ್ಕಿ ಹರಿದ ಪರಿಣಾಮ ಮನೆಗಳು ಜಲಾವೃತವಾಗಿದ್ದವು.
ಕೋರಮಂಗಲದಲ್ಲಿ ಜಲಾವೃತ ಪ್ರದೇಶದಲ್ಲಿ ಸಿಕ್ಕಿಕೊಂಡವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ದೋಣಿಗಳ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು. ರಸ್ತೆಗಳಲ್ಲಿ ಮೂರ್‍ನಾಲ್ಕು ಅಡಿ ನೀರು ನಿಂತಿದ್ದರಿಂದ ವಾಹನಗಳು ಕೆಟ್ಟುನಿಂತವು.
ಬಿಎಂಟಿಸಿಯ ಶಾಂತಿನಗರ ಘಟಕದಲ್ಲಿ ಅಡಿಗಟ್ಟಲೇ ನೀರು ನಿಂತಿದ್ದರಿಂದ 156 ಬಸ್‌ಗಳು ಕೆಟ್ಟುನಿಂತು ಸಂಚಾರದಿಂದ ದೂರ ಉಳಿದಿದ್ದವು. ಕೋರಮಂಗಲದ ಬಿಎಂಟಿಸಿ ಟಿಟಿಎಂಸಿಯ ನೆಲಮಹಡಿಯಲ್ಲಿ ಏಳು ಅಡಿ ನೀರು ನಿಂತಿದ್ದರಿಂದ ಆರು ಕಾರು, 25 ಬೈಕ್‌ಗಳು ಸಂಪೂರ್ಣ ಮುಳುಗಿದ್ದವು. ಅಗ್ನಿಶಾಮಕ ಸಿಬ್ಬಂದಿ ನೀರನ್ನು ಪಂಪ್ ಮಾಡಿ ಹೊರ ಹಾಕುವ ಹೊತ್ತಿಗೆ ಏಳೆಂಟು ಗಂಟೆ ಕಳೆದಿತ್ತು. ಕೋರಮಂಗಲದ ಬಹಳಷ್ಟು ಬಹುಮಹಡಿ ಕಟ್ಟಡಗಳ ನೆಲಮಹಡಿಗೆ ನುಗ್ಗಿದ್ದ ನೀರನ್ನು ಹೊರಹಾಕುವಷ್ಟರಲ್ಲಿ ಮಳಿಗೆದಾರರು ಹೈರಾಣಾಗಿದ್ದರು.
ಅಂಕಿಅಂಶ:
ದಶಕದ ದಾಖಲೆ ಮಳೆ
14 ಸೆಂ ಮೀ ಮಳೆ: ಒಂದೇ ದಿನ ಸುರಿದ ದಾಖಲೆ ಮಳೆ 7 ಸೆಂಮೀ: 2009ರಲ್ಲಿ ಒಂದೇ ದಿನ ಸುರಿದ ಮಳೆ ಇನ್ನೂ ಎರಡು ಮೂರು ದಿನ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಮೈಸೂರಿನಲ್ಲಿ ಭಾರಿ ಮಳೆಗೆ ಓರ್ವ ಸಾವು
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸೋಮವಾರ ಮುಂಜಾನೆ ಹಾಗೂ ಮಂಗಳವಾರ ದಿನವಿಡೀ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ನಿರಂತರ ಮಳೆಯಿಂದ ಮೈಸೂರಿನಲ್ಲಿ ಮನೆಯ ಗೋಡೆ ಕುಸಿದು ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ. ಮಂಡ್ಯದಲ್ಲಿ ಸುಮಾರು 30.10 ಮಿಮೀ ಮಳೆ ಸುರಿದು ದಾಖಲೆ ಸೃಷ್ಠಿಸಿದೆ.
ಮೈಸೂರಿನ ಗಾಂಧಿ ನಗರದ ಲಿಡ್ಕರ್ ಕಾಲೋನಿ ನಿವಾಸಿ ಮದಂಧರ್ ಅಲಿಯಾಸ್ ಮಗ್ಗಿ(42) ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನಿದ್ರೆಗೆ ಜಾರಿದ್ದಾರೆ. ಈ ವೇಳೆ ಸುರಿದ ಭಾರಿ ಮಳೆಯಿಂದಾಗಿ ಚರಂಡಿ ನೀರು ನುಗ್ಗಿ ಮೊಹಿನ್ ಮನೆ ಜಲಾವೃತಗೊಂಡಿದೆ. ಗೋಡೆ ಶಿಥಿಲಗೊಂಡು ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ಮದಂಧರ್ ಮೃತಪಟ್ಟಿದ್ದಾರೆ. ಮೈಸೂರು, ಮಂಡ್ಯ, ಎಚ್.ಡಿ.ಕೋಟೆ, ನಂಜನಗೂಡು, ಹುಣಸೂರು ತಾಲೂಕುಗಳಲ್ಲೂ ಭಾರಿ ಮಳೆ ಕಾರಣ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ತಡವಾಗಿ ಆಚರಿಸಲಾಯಿತು.
ಮೈಸೂರು ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಬನ್ನಿಮಂಟಪ, ಪಡುವಾರಹಳ್ಳಿ, ಬಂಬೂಬಜಾರ್, ಮೇದರಕೇರಿ, ಹನುಮಂತನಗರ, ಯಾದವಗಿರಿ, ಕೆಸರೆ ಸೇರಿದಂತೆ ಇನ್ನಿತರ ಭಾಗಗಳ ನಿವಾಸಿಗಳು ಪರದಾಡುವಂತಾಯಿತು. ಬೆಂಗಳೂರು- ಊಟಿ ಹೆದ್ದಾರಿಯ ಅರಮನೆ ಮುಂಭಾಗದ ರಸ್ತೆ ಬದಿಗಳಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಸ್ಲಾಬ್‌ಗಳು ಕಿತ್ತು ಬಿದ್ದಿವೆ. ತಿ.ನರಸೀಪುರ ತಾಲೂಕಿನಲ್ಲಿ ಮೋಡಕವಿದ ವಾತಾವರಣವಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಮಧ್ಯಾಹ್ನ 3ಗಂಟೆಯಿಂದಲೇ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ರಾವಂದೂರು ಹೋಬಳಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ತುಂಬಿ ಹರಿದ ಲೋಕಪಾವನಿ: ಮಂಡ್ಯ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಜಿಲ್ಲೆಯ ಕೆರೆ ಕಟ್ಟೆಗಳಲ್ಲಿ ನೀರು ತುಂಬಿ ಜಮೀನುಗಳಲ್ಲಿ ನೀರು ಹರಿದಿದೆ. ಬತ್ತಿ ಹೋಗಿದ್ದ ಶ್ರೀರಂಗಪಟ್ಟಣದ ಲೋಕಪಾವನಿ ನದಿ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹರ್ಷ ಮನೆಮಾಡಿದೆ.