Advertisement
ಇನ್ನು ಬಾರಿ ಮಳೆಯು 71ನೇ ಸ್ವಾತಂತ್ರ್ಯೋತ್ಸವದ ಸಡಗರ, ಸಂಭ್ರಮಕ್ಕೂ ಅಡ್ಡಿಯುಂಟು ಮಾಡಿತು. ಜಿಲ್ಲಾಡಳಿತದಿಂದ ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು. ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಒಂದೆಡೆ ಮೈದಾನ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದರೆ, ಅಲ್ಲಲ್ಲಿ ನೀರು ನಿಂತಿದ್ದ ಕಾರಣ, ಪಥಸಂಚಲನವನ್ನು ರದ್ದುಪಡಿಸಲಾಯಿತು.
Related Articles
Advertisement
ಇನ್ನೂ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಅನೇಕ ರಸ್ತೆಗಳು ಜಲಾವೃತಗೊಂಡಿದ್ದ ಪರಿಣಾಮ ವಾಹನ ಸವಾರರು ಪಡುವಂತಾಯಿತು. ಭಾರಿ ಮಳೆಯಿಂದಾಗಿ ಅರಮನೆ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದೆ. ಬೆಂಗಳೂರು- ಊಟಿ ಹೆದ್ದಾರಿಯ ಅರಮನೆ ಮುಂಬಾಗದ ರಸ್ತೆ ಬದಿಗಳಲ್ಲಿ ಹಾಕಲಾಗಿದ್ದ ಕಾಂಕ್ರೀಟ್ ಸ್ಲಾಬ್‌ಗಳು ಕಿತ್ತು ಬಿದ್ದಿವೆ.
ವ್ಯಕ್ತಿ ಸಾವು: ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ಗಾಂಧಿನಗರದ ಲಿಡ್ಕರ್ ಕಾಲೋನಿಯಲ್ಲಿ ನಡೆದಿದೆ.ಗಾಂಧಿ ನಗರದ ಲಿಡ್ಕರ್ ಕಾಲೋನಿ ನಿವಾಸಿ ಮದಂಧರ್ ಅಲಿಯಾಸ್ ಮಗ್ಗಿ (42) ಮೃತ ದುರ್ದೈವಿ. ಕೋಳಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮದಂಧರ್, ಮೊಹಿನ್ ಎಂಬುವರ ಮನೆಯಲ್ಲಿ ವಾಸವಾಗಿದ್ದ. ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮದಂಧರ್ ನಿದ್ರೆಗೆ ಜಾರಿದ್ದಾರೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚರಂಡಿ ನೀರು ನುಗ್ಗಿಮೊಹಿನ್ ಮನೆ ಜಲಾವೃತಗೊಂಡಿದ್ದು, ಗೋಡೆ ಶಿಥಿಲಗೊಂಡು ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಯೊಳಗೆ ಮಲಗಿದ್ದ ಮದಂಧರ್ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಧನುಷ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಈ ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರವು ಮಳೆ: ಮಂಗಳವಾರ ಸಂಜೆ 5.30ರ ಸುಮಾರಿಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಿತು. ಹೀಗಾಗಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಬಹುತೇಕ ಕಡೆಗಳಲ್ಲಿ ಸಂಜೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾದವು. ತಿ.ನರಸೀಪುರ ತಾಲೂಕಿನಲ್ಲಿ ಮೋಡಕವಿದ ವಾತಾವರಣವಿದ್ದು, ಭಾರಿ ಗಾಳಿಯಿಂದಾಗಿ ಮಳೆ ಬಿದ್ದಿಲ್ಲ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಮಧ್ಯಾಹ್ನ 3 ಗಂಟೆಯಿಂದಲೇ ಬಾರಿ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ರಾವಂದೂರು ಹೋಬಳಿಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಮೈಸೂರು ತಾಲೂಕು ರಮ್ಮನಹಳ್ಳಿಯಲ್ಲಿ 100.50 ಮಿ.ಮೀ ಮಳೆಯಾಗಿದೆ. ತಿ. ನರಸೀಪುರ ತಾಲೂಕು ಕೇತುಪುರದಲ್ಲಿ 96.50 ಮಿ.ಮೀ, ಹೊಸಕೋಟೆಯಲ್ಲಿ 65 ಮಿ.ಮೀ, ಕೊಡಗಳ್ಳಿಯಲ್ಲಿ 66.50 ಮಿ.ಮೀ, ಹನುಮನಾಳು 70.50 ಮಿ.ಮೀ, ತುರುಗನೂರು 65ಮಿ.ಮೀ, ಮಲೆಯೂರು 65 ಮಿ.ಮೀ, ರಂಗಸಮುದ್ರ 74.50 ಮಿ.ಮೀ, ಅತ್ತಹಳ್ಳಿ 80 ಮಿ.ಮೀ, ಬೀಡನಹಳ್ಳಿಯಲ್ಲಿ 69 ಮಿ.ಮೀ ಮಳೆಯಾಗಿದೆ.