ನವ ದೆಹಲಿ: ಕೇರಳವನ್ನು ಪ್ರವೇಶಿಸಿರುವ ಮುಂಗಾರು ಮಾರುತ, 2 ದಿನಗಳಲ್ಲೇ ಮಹಾರಾಷ್ಟ್ರ ಮತ್ತು ಗೋವಾವನ್ನು ಪ್ರವೇಶಿಸಲಿದ್ದು, ಇದರ ಪರಿಣಾಮ ಕರ್ನಾಟಕದ ಕರಾವಳಿಯಲ್ಲಿ ಕಾಣಿಸಿಕೊಳ್ಳಲಿದೆ. ಕರಾವಳಿ ಕರ್ನಾಟಕ, ಕೊಂಕಣ ಪ್ರದೇಶದಲ್ಲಿ ಇದೇ 7ರಿಂದ 10ರವರೆಗೆ ಭಾರೀ ಮಳೆ ಸುರಿಯಲಿದ್ದು, 10ರ ನಂತರ ಪ್ರವಾಹ ಭೀತಿ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಸದ್ಯಕ್ಕೆ ಕೇರಳವನ್ನು ಆವರಿಸಿರುವ ಮುಂಗಾರು ಮಾರುತಗಳು, ತಮಿಳುನಾಡಿನ ಕೆಲ ಭಾಗಗಳಿಗೂ ಕಾಲಿಟ್ಟಿವೆ. ಸದ್ಯದಲ್ಲೇ, ಇವು ಭಾರತದ ನೈಋತ್ಯ, ಮಧ್ಯ ಹಾಗೂ ಪೂರ್ವದ ಕಡೆಗೂ ಹರಡಲಿವೆ ಎಂದು ಇಲಾಖೆ ತಿಳಿಸಿದೆ. ಏತ ನ್ಮಧ್ಯೆ, ಖಾಸಗಿ ಹವಾಮಾನ ಇಲಾಖೆಯ ಸಿಇಒ ಜತಿನ್ ಸಿಂಗ್ ಕೂಡಾ ಇದೇ ವಿಚಾರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
“ಮುಂಗಾರು ಮಾರುತಗಳು ಬಲಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕರಾವಳಿ ಹಾಗೂ ಕೊಂಕಣ ಭಾಗಗಳಲ್ಲಿ ವರುಣನ ರುದ್ರ ನರ್ತನವಾಗಲಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ, 8ರಿಂದ 10ರವರೆಗೆ ಅಗಾಧ ಪ್ರಮಾಣದಲ್ಲಿ ಮಳೆಯಾಗಲಿದ್ದು, ಕೂಡಲೇ ಎಚ್ಚರಿಕೆ ಸಂದೇಶ ರವಾನಿಸಬೇಕಾಗಿದೆ. ಎಲ್ಲರೂ ಆದಷ್ಟು ಮನೆಯೊಳಗೇ ಇರುವುದು ಒಳಿತು ಎಂದೂ ಅವರು ತಿಳಿಸಿದ್ದಾರೆ. ಕೊಂಕಣ ಮತ್ತು ಗೋವಾದಲ್ಲಿ
ಚಂಡಮಾರುತದ ಪ್ರಭಾವ ಕಂಡುಬರುತ್ತಿದ್ದು, ಅದು ಕ್ರಮೇಣ ಮಹಾರಾಷ್ಟ್ರ ಕರಾವಳಿಯತ್ತ ಚಲಿಸಬಹುದು ಎಂದೂ ಹೇಳಲಾಗಿದೆ.