ಕೊಪ್ಪಳ : ಕಳೆದ ಕೆಲ ದಿನಗಳಿಂದ ಕರುನಾಡಿನದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆಯೂ ಪ್ರವಾಹ ಪರಿಸ್ಥಿತಿಯಲ್ಲಿ ಜನ ತತ್ತರಿಸುತ್ತಿದ್ದಾರೆ.ತಾಲೂಕಿನ ಗಂಗಾವತಿ-ಕಂಪ್ಲಿ ಸೇತುವೆ ಉಕ್ಕಿ ಹರಿಯುತ್ತಿದ್ದು, ಜಲಾವೃತಗೊಂಡಿರುವುದು ಜನರಲ್ಲಿ ಆತಂಕ ಮನೆಮಾಡಿದೆ.
ಶನಿವಾರ ತಡರಾತ್ರಿ ತುಂಗಭದ್ರಾ ಡ್ಯಾಂನಿಂದ ಲಕ್ಷಕ್ಕೂ ಅಧಿಕ ಪ್ರಮಾಣದ ಕ್ಯೂಸೆಕ್ ನೀರು ಬಿಟ್ಟ ಹಿನ್ನಲೆ ಗಂಗಾವತಿ-ಕಂಪ್ಲಿ ಸೇತುವೆ ಸಂಪೂರ್ಣ ಜಲವೃತಗೊಂಡಿದೆ. ಪ್ರವಾಹ ಭೀತಿಯಲ್ಲಿ ಜನ ಸುರಕ್ಷಿತ ಪ್ರದೇಶದತ್ತ ಧಾವಿಸುತ್ತಿದ್ದಾರೆ.ಮಳೆಯಿಂದ ನಗರದ ರಸ್ತೆಗಳು ನೀರಿನಿಂದ ಆವೃತವಾಗಿವೆ.ಆಯಾ ಪ್ರದೇಶಕ್ಕೆ ಹೋಗುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಂಗುರ ಸಾರಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ.ಮಳೆಯಿಂದ ಶ್ರೀಕೃಷ್ಣ ದೇವರಾಯ ಸಮಾಧಿಯ ಮಾರ್ಗ ಜಲಾವೃತವಾಗಿದ್ದು ,ಋಷಿಮುಖ ಪರ್ವತಕ್ಕೆ ಹೋಗುವ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಭೀತಿ ಸ್ಥಳದಲ್ಲಿ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ಪಡೆ ನಿಯೋಜನೆಗೊಂಡು, ಸೇತುವೆ ಮಾರ್ಗದ ಸಂಚಾರಕ್ಕೆ ಅವಕಾಶ ನೀಡದೆ ಜನರ ಸುರಕ್ಷಣೆಯಲ್ಲಿ ನಿರತರಾಗಿದ್ದಾರೆ.