ದೊಡ್ಡಬಳ್ಳಾಪುರ: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಗಾಳಿ ಸಹಿತ ಮಳೆ ಯಿಂದಾಗಿ ನಗರದ ವಿವಿಧೆಡೆ ಚರಂಡಿ ಗಳು ತುಂಬಿ ರಸ್ತೆಯಲ್ಲಿಯೇ ನೀರು ಹರಿದ ಪರಿಣಾಮ ವಾಹನ ಸವಾರರು ಪ್ರಯಾಸಪಡುವಂತಾಗಿತ್ತು. ಸಾರ್ವಜನಿಕರು ನಡೆದುಕೊಂಡು ಹೋಗಲು ಸಾಧ್ಯ ವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಾಲೂಕು ಕಚೇರಿ ರಸ್ತೆಯ ನಗರಸಭೆ ಕಾರ್ಯಾಲಯದ ಕಡೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಇತ್ತೀಚೆಗಷ್ಟೇ ಮೋರಿ ನಿರ್ಮಿಸಲಾಗಿದ್ದು, ಇದರಲ್ಲಿ ನೀರು ಸರಾಗವಾಗಿ ಹೋಗದೆ ನಗರದ ಅರ್ಧ ಭಾಗದಷ್ಟು ನೀರು ರಸ್ತೆಯಲ್ಲಿ ಹರಿಯುವಂತಾಗಿತ್ತು. ಬಿರುಗಾಳಿ ಯಿಂದಾಗಿ ನಗರದಲ್ಲಿ ಸಣ್ಣ ಪುಟ್ಟ ಮರ ಗಳ ರಂಬೆಗಳು ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.
ನಗರದ ಇಸ್ಲಾಂಪುರ, ಚೈತನ್ಯನಗರ, ಕರೇನಹಳ್ಳಿಯ ತಗ್ಗು ಪ್ರದೇಶದ ಮನೆ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿ ನಾಗರಿಕರು ನೀರನ್ನು ಹೊರ ಹಾಕಲು ಪ್ರಯಾಸ ಪಡುವಂತಾಗಿತ್ತು.
ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಮಳೆ ನೀರು ಹರಿದು, ತೋಟದ ಬೆಳೆಗಳು, ಹಸುವಿನ ಕೊಟ್ಟಿಗೆಗಳಿಗೆ ಹಾನಿಯಾಗಿವೆ.
ಚರಂಡಿ ಸರಿಪಡಿಸಿ: ನಗರದಲ್ಲಿ ಇತ್ತೀಚೆಗೆ ಹೊಸದಾಗಿ ನಿರ್ಮಿಸ ಲಾಗುತ್ತಿರುವ ಚರಂಡಿಗಳು ಅತ್ಯಂತ ಅವೈಜ್ಞಾನಿಕವಾಗಿರುವುದೇ ಮಳೆ ನೀರು ರಸ್ತೆ ಮೇಲೆ ನುಗ್ಗಲು ಕಾರಣವಾಗಿದೆ. ಪ್ಲಾಸ್ಟಿಕ್ ಕವರ್, ನೀರಿನ ಖಾಲಿ ಬಾಟಲಿಗಳು ಸಹ ಚರಂಡಿಗೆ ಅಡ್ಡಲಾಗಿ ನೀರು ಹರಿದು ಹೋಗಲು ಅಡ್ಡಿ ಯಾಗಿ ಸಹ ನೀರು ರಸ್ತೆ ಮೇಲೆ ಬರಲು ಕಾರಣ ವಾಗಿತ್ತು. ನಗರದ ಇಸ್ಲಾಂಪುರದಲ್ಲಿ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ಸಾರಿ ಮಳೆ ಬಂದಾಗಲೂ ಇಲ್ಲಿನ ನಾಗರಿಕರಿಗೆ ಯಾತನೆ ತಪ್ಪುತ್ತಿಲ್ಲ. ಈ ಬಗ್ಗೆ ನಗರಸಭೆ ಗಮನ ಹರಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.