ಆಳಂದ: ಪಟ್ಟಣದ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದ ಕೂಡಿದ ಸಿಡಿಲಿಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ವರದಿಯಾಗಿದೆ.
ಪಟ್ಟಣದ ಹೊರವಲಯದ ಹತ್ತಿ ಎಂಬುವರ ಹೊಲದಲ್ಲಿ ಡೋಹರ ಗಲ್ಲಿಯ ನಿವಾಸಿ ಸುರೇಶ ದಿಗಂಬರ ಶೇರಖಾನೆ (18) ಎಂಬ ಯುವಕನೇ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಕ್ಷ್ತ್ರಿಣ ಮಹಾದೇವ ಶೇರಖಾನೆ (62), ರಾಮದಾಸ ಗಂಗಾರಾಮ ಚವ್ಹಾಣ (47), ಅವಧೂತ ಲಕ್ಷ್ಮಣ (37), ಮೃತನ ಸಹೋದರ ಲಾಡಪ್ಪ ದಿಗಂಬರ ಶೇರಖಾನೆ (20) ಎಂಬುವರು ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೂಂದಡೆ ಪಟ್ಟಣದ ಮಹ್ಮದ್‌ಸಾಬ ಇಸ್ಮಾಯಿಲ ಎಂಬುವರ ಹೊಲದಲ್ಲಿ ಖಾಜಿಗಲ್ಲಿಯ ನಿವಾಸಿ ಅಬ್ದುಲ್ಗನಿ ಲಾಡ್ಲೆಸಾಬ ಮಾಸುಲ್ದಾರ (13) ಬಾಲಕ ಸಿಡಿಲು ಬಡಿದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಆತನ ತಂದೆ ಲಾಡ್ಲೆಸಾಬ ಸೈಫಾನಸಾಬ ಮಾಸುಲ್ದಾರ (47) ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಂ.ಎನ್. ಚೋರಗಸಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾದ ಗಾಯಗಳನ್ನು ಭೇಟಿ ಮಾಡಿದ ಅವರು, ಕುಟುಂಬಕ್ಕೆ ಪ್ರಕೃತಿ ವಿಕೋಪದಡಿ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು. ಗ್ರಾಮಲೇಖಪಾಲಕ ರಮೇಶ ಮಾಳಿ ಇದ್ದರು.
ಮತ್ತೂಂದಡೆ ಮಳೆ, ಬೀರುಗಾಳಿಯ ಆರ್ಭಟಕ್ಕೆ ತಾಲೂಕಿನ ಖಜೂರಿ ಗ್ರಾಮದಲ್ಲಿ ಭೀಮರಾವ್ ಢಗೆ, ಕರಸಬಪ್ಪ ಬಾಬು ಢಗೆ ಇನ್ನಿತರರಿಗೆ ಸೇರಿದ ಹೊಲದಲ್ಲಿನ ಹತ್ತಾರು ಗಿಡ, ಮರಗಳು ನೆಲಕ್ಕುರುಳಿವೆ. 50ಕ್ಕೂ ಹೆಚ್ಚು ಪತ್ರಾಟೀನಗಳು ಹಾರಿದ್ದು, ಟ್ರ್ಯಾಕ್ಟರ್ ಜಖಂಗೊಂಡಿದೆ.