Advertisement

ಮಳೆ ಆರ್ಭಟ: ಮನೆಗಳಿಗೆ ನುಗ್ಗಿದ ನೀರು

12:29 PM Jun 23, 2019 | Suhan S |

ಅಂಕೋಲಾ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ತಾಲೂಕಿನಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಂಡು ಇಲ್ಲಿನ ನಿವಾಸಿಗಳಿಗೆ ಆತಂಕ ಸೃಷ್ಠಿಸಿದೆ.

Advertisement

ಕಳೆದ ಗುರುವಾರದಿಂದ ಈ ವರೆಗೆ 205 ಮಿ.ಮೀ. ಮಳೆ ಸುರಿದಿದ್ದು, ಮುಂದಿನ 24 ಗಂಟೆ ತಾಲೂಕಿನಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಾಲೂಕಾಡಳಿತ ತಿಳಿಸಿದೆ. ಗಂಗಾವಳಿ ನದಿ ಪಾತ್ರದ ವಾಸರೆ ಕೊಡ್ಸಣಿ ಮತ್ತು ಕುರ್ವೆ ದ್ವಿಪಗಳಲ್ಲಿ ನೆರೆ ಭೀತಿ ಎದುರಾಗಿದೆ. ಪೂಜಗೇರಿ ಹಳ್ಳ ಉಕ್ಕಿ ಹರಿದ ಪರಿಣಾಮ ಪೂಜಗೇರಿ ಮತ್ತು ನದಿಬಾಗ ಗ್ರಾಮದಲ್ಲಿ ಹಳ್ಳದ ನೀರು ಸಮುದ್ರ ಸೇರುವ ಕೊಂಡಿಯು, ಬೇಸಿಗೆಯಲ್ಲಿ ಸಮುದ್ರದ ಅಲೆಯ ರಭಸಕ್ಕೆ ಮರಳಿನಿಂದ ಮುಚ್ಚಿರುವುದರಿಂದ ಹಳ್ಳದ ಹಿನ್ನೀರು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಘಡಗಳನ್ನು ಸೃಷ್ಠಿಸುತ್ತಿದೆ. ಇದರಿಂದಾಗಿ ಈ ಭಾಗದಲ್ಲಿರುವ ಸುಮಾರು 50ಕ್ಕೂ ಹೆಚ್ಚಾ ಮನೆಗಳು ಜಲಾವೃತಗೊಂಡಿದೆ.

ವಂದಿಗೆ, ಹೊಸಗದ್ದೆ ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೇ ಹಳ್ಳದಿಂದ ಸಮುದ್ರ ಸೇರುತ್ತದೆ. ಮಳೆಗಾಲದ ಆರಂಭದಲ್ಲಿ ಮಳೆಯ ರಭಸಕ್ಕೆ ಹಳ್ಳ ತುಂಬಿ ಹರಿಯುವುದರಿಂದ ಸಮುದ್ರ ಸೇರದೆ ಇಲ್ಲಿಯ ಅವಾಂತರಕ್ಕೆ ಕಾರಣವಾಗುತ್ತಿದೆ.

ತಡೆಗೋಡೆ ಇಲ್ಲ: ಸಮುದ್ರದ ಅಲೆಗಳು ಅಪ್ಪಳಿಸುವ ಭಾಗದಲ್ಲಿ ಈ ಹಿಂದೆ ಹಾಕಿರುವ ತಡೆಗೋಡೆ ಅಲೆಗಳ ರಭಸಕ್ಕೆ ಕೊಚ್ಚಿ ಹೊಗಿದ್ದು ನದಿಬಾಗ ತೀರದ ಕೆಲವು ಮನೆಗಳಿಗೆ ನೀರು ಒಳ ನುಗ್ಗುತ್ತಿದೆ. ಸಮುದ್ರದ ಅಲೆಗಳ ರಭಸ ಹೆಚ್ಚಾದರೆ ನೇರವಾಗಿ ಇಲ್ಲಿನ ಮನೆಗಳಿಗೆ ನುಗ್ಗುವುದಲ್ಲದೆ. ಈ ಪುಟ್ಟ ಗ್ರಾಮ ದ್ವೀಪವಾಗುತ್ತದೆ. ಇಲ್ಲಿಯ ಜನರಿಗೆ ಒಡಾಡಲು ದಾರಿ ಇಲ್ಲದೆ ಮನೆಯಲ್ಲಿಯೆ ಇರುವ ಸಂಕಷ್ಟ ಎದುರಾಗಿದೆ. ಯುವಕರು ಮಾತ್ರ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತರಲು ಗ್ರಾಮದಿಂದ ಪಟ್ಟಣಕ್ಕೆ ಬರಲು ತಮ್ಮ ಜೀವ ಕೈಯಲ್ಲಿಟ್ಟುಕೊಂಡು ಎದೆ ಮಟ್ಟದವರೆಗೆ ತುಂಬಿದ ನೀರಿನಲ್ಲಿ ಸಾಗಿ ಬರುತ್ತಾರೆ. ಈ ಭಾಗಕ್ಕೆ ಶಾಶ್ವತ ಪರಿಹಾರ ಸಿಗಬಹುದೆ ಎಂದು ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Advertisement

ನೆರೆ ಭೀತಿ: ಗುರುವಾರದಿಂದ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಹೆಚ್ಚುತ್ತಿದ್ದು ವಾಸರೆ ಕೊಡ್ಸಣಿ ಮತ್ತು ಕುರ್ವೆ ದ್ವಿಪಗಳಲ್ಲಿ ಭಾಗದಲ್ಲಿ ಮುಳುಗಡೆ ಆಗುವ ಸಂಭವವು ಇದೆ. ಹೀಗೆ ಮಳೆ ಮುಂದುವರೆದರೆ ಈ ಪ್ರದೇಶದಲ್ಲಿನ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುವುದು ಎಂದು ತಾಲೂಕಾಡಳಿತ ತಿಳಿಸಿದೆ. ತಾಲೂಕಾಡಳಿತ ಎಲ್ಲಡೆ ತನ್ನ ಅಧಿಕಾರಿ ವರ್ಗದವರನ್ನು ನೇಮಿಸಿದ್ದು, ಮಳೆಗೆ ಯಾವುದೆ ಅನಾಹುತ ಸಂಭವಿಸಿದರೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next