ಉಡುಪಿ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ನಗರದ ಹಲವಾರು ಭಾಗ ಜಲಾವೃತಗೊಂಡು ಕೃತಕ ನೆರೆ ಸೃಷ್ಟಿಯಾಗಿದೆ. ಕಾಪು ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಸುರಿದಿದೆ.
ಬುಧವಾರ ತಡರಾತ್ರಿ ಗುರುವಾರ ಇಡೀ ದಿನ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿದಿದೆ. ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಗುರುವಾರ ಬೆಳಗ್ಗೆ 8.30ರ ಹಿಂದೆ 24 ತಾಸುಗಳಲ್ಲಿ ಉಡುಪಿ – 48.6, ಬ್ರಹ್ಮಾವರ – 26.5, ಕಾಪು – 57.1 ಮಿ. ಮೀ. ಸರಾಸರಿ ಮಳೆಯಾಗಿದೆ. ಕಾಪು ತಾಲೂಕಿನ ಪಲಿಮಾರು ಗ್ರಾಮದ ಪುರುಷೋತ್ತಮ ಆಚಾರ್ಯರ ಮನೆಯ ಗೋಡೆಗೆ ಭಾಗಶಃ ಹಾನಿ ಸಂಭವಿಸಿದೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಮಲ್ಪೆ, ಬೈಲಕೆರೆ, ಮಠದಬೆಟ್ಟು, ಬನ್ನಂಜೆ, ನಿಟ್ಟೂರು, ಗುಂಡಿಬೈಲು, ಕಲ್ಮಾಡಿ, ಅಂಬಲಪಾಡಿ ಭಾಗದಲ್ಲಿ ಗದ್ದೆ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು. ಉಡುಪಿ, ಮಣಿಪಾಲ, ಮಲ್ಪೆ ಪೇಟೆಯಲ್ಲಿ ಚರಂಡಿ ಭರ್ತಿಯಾಗಿ ರಸ್ತೆ, ಅಂಗಡಿ ಮುಂಭಾಗದ ರಸ್ತೆ ಮೇಲೆ ಮಳೆ ನೀರು ಹರಿಯಿತು. ಕರಾವಳಿ ಬೈಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೀರ ಅಡಚಣೆ ಉಂಟಾಯಿತು. ಚರಂಡಿಯಿಂದ ಉಕ್ಕೇರಿದ ಮಳೆ ನೀರು ಸರ್ವಿಸ್ ರೋಡ್ ಮತ್ತು ಫ್ಲೈಓವರ್ ಕೆಳಗೆ ಸಾಕಷ್ಟು ಪ್ರಮಾಣದಲ್ಲಿ ಕೃತಕ ನೆರೆಯಂತೆ ಸೃಷ್ಟಿಯಾಗಿ ಅವಾಂತರ ಸೃಷ್ಟಿಯಾಯಿತು.
ಟ್ರಾಫಿಕ್ ಜಾಮ್
ನಿರಂತರ ಮಳೆಯಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಕೆಎಂ ಮಾರ್ಗ, ಕಲ್ಸಂಕ ವೃತ್ತ ದಲ್ಲಿ ಸಂಚಾರ ದಟ್ಟಣೆಯನ್ನು ಪೊಲೀಸರು ನಿಯಂತ್ರಿಸಿ ದರು. ಉಡುಪಿ ಮೆಸ್ಕಾಂ ಡಿವಿಜನ್‌ನಲ್ಲಿ ಹಲವೆಡೆ ವಿದ್ಯುತ್ ಸಂಪರ್ಕ ಕೆಲ ಸಮಯ ಕೈಕೊಟ್ಟಿತು. 9 ವಿದ್ಯುತ್ ಕಂಬಗಳು, ಎರಡು ಟಿಸಿಗೆ ಹಾನಿಯಾಗಿದ್ದು, ಮೆಸ್ಕಾಂ ಸಿಬಂದಿ ತುರ್ತು ಕಾಮಗಾರಿ ಕೈಗೊಂಡರು.
ರಸ್ತೆಗಳೆಲ್ಲ ಕೆಸರುಮಯ
ವಾರಾಹಿ ಮತ್ತು ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಪೈಪ್‌ಲೈನ್ ತೋಡಿರುವ ಗುಂಡಿಯನ್ನು ತೋಡಿ ಮುಚ್ಚಿದ ಕಡೆ ರಸ್ತೆ ಕೆಸರುಮಯವಾಗಿತ್ತು. ಇದಕ್ಕೆ ಡಾಮರು ಕಾಮಗಾರಿ ನಡೆಸದೆ ಇದ್ದದ್ದು ಕಾರಣವಾಗಿದೆ. ಗುಂಡಿಬೈಲು, ಉಡುಪಿ-ಮಣಿಪಾಲ ಮುಖ್ಯ ರಸ್ತೆಗಳ ಬದಿಯಲ್ಲಿ ಕೆಸರು ನೀರು ಹರಿಯುತ್ತಿತ್ತು. ವಾಹನ ಸವಾರರು, ಪಾದಚಾರಿಗಳು ಇದರಿಂದ ಪರಿತಪಿಸುವಂತಾಯಿತು.
ಗುಂಡಿಬೈಲು: ಪೈಪ್ ಒಡೆದು ಅವಾಂತರ
ವಾರಾಹಿ, ಒಳಚರಂಡಿ ಕುಡಿಯುವ ನೀರು ಕಾಮಗಾರಿ ನಡೆಸಿದ್ದ ಜಾಗದಲ್ಲಿ (ಗುಂಡಿಬೈಲು) ದೊಡ್ಡಮಟ್ಟದಲ್ಲಿ ನೀರು ಹರಿದಿದ್ದು, ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ವಾರಾಹಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿ ದೊಡ್ಡಮಟ್ಟದಲ್ಲಿ ನೀರು ಸೋರಿಕೆಯಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು. ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಸದಸ್ಯೆ ಗೀತಾ ಶೇಟ್ ಭೇಟಿ ನೀಡಿ ಪರಿಶೀಲಿಸಿದರು. ಮಣ್ಣನ್ನು ಅಗೆದು ತುರ್ತು ಕಾಮಗಾರಿ ನಡೆಸಿ ಸಂಜೆಯೊಳಗೆ ದುರಸ್ತಿಪಡಿಸಲಾಯಿತು.