Advertisement

ಭಾರೀ ಮಳೆ: 60ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

12:24 PM May 28, 2017 | Team Udayavani |

ನಂಜನಗೂಡು: ಶುಕ್ರವಾರ ರಾತ್ರಿಯಲ್ಲಿ ಸುರಿದ ಭಾರೀ ಮಳೆಗೆ ತಾಲೂಕಾದ್ಯಂತ ಜನ ಜೀವನ ಅಸ್ತವ್ಯಸ್ತವಾಗಿದ್ದು, ಅಪಾರ ಹಾನಿ ಉಂಟಾಗಿದೆ. ತಾಲೂಕಿನ ಹೆಡತಲೆ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು,  6 ಗುಡಿಸಲುಗಳು ನೆಲಕಚ್ಚಿವೆ.

Advertisement

ಅನೇಕ ವರ್ಷಗಳಿಂದ ಮಳೆ ಇಲ್ಲದೆ  ಕಂಗೆಟ್ಟಿದ್ದ ಜನತೆ ಮಳೆಬಂತು ಎಂದು ನಿಟ್ಟುಸಿರು ಬಿಡುವಾಗಲೇ ಅತಿವೃಷ್ಟಿಯಿಂದ ನೂರಾರು ಜನ ಈಗ ಬೀದಿಗೆ ಬಂದು ನಿಲ್ಲುವಂತಾಗಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಮಳೆಯಾಗದೆ ಕಂಗೆಟ್ಟಿದ್ದ ಜನತೆ ಈ ಬಾರಿ ಮಳೆ ಬಿದ್ದಿರುವುದನ್ನು ಕಂಡು ಖುಷಿ ಪಡುತ್ತಿರುವಾಗಲೇ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಈ ಗ್ರಾಮದಲ್ಲಿ ಹರಿಯುವ ಗುಂಡ್ಲು ನದಿ ಪಾತ್ರದ ಮೇಲ್ಭಾಗದಲ್ಲಿ ಸಣ್ಣ ನಿರಾವರಿ ಇಲಾಖೆ ಕಳಪೆ ಕಾಮಗಾರಿ ನಡೆಸಿ ನಿರ್ಮಿಸಿದ್ದ ಚೆಕ್‌ ಡ್ಯಾಂಗಳೆಲ್ಲ ಮಳೆಯ ಆರ್ಭಟಕ್ಕೆ  ಕೊಚ್ಚಿ ಹೋಗಿದ್ದೇ ತಾಲೂಕಾದ್ಯಂತ ಈ ರೀತಿಯ ಪ್ರವಾಹ ಉಂಟಾಗಲು ಕಾರಣವಾಗಿದೆ.

ವಿಷಯ ತಿಳಿದ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಇಒ ರೇವಣ್ಣ ಮತ್ತು ತಹಶೀಲ್ದಾರ್‌ ಬಸವರಾಜ್‌ ಚಿಗರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಶಾಸಕ ಕಳಲೆ ಕೇಶ‌ವಮೂರ್ತಿ ಮಾತನಾಡಿ, ಗುಂಡ್ಲು ನದಿಗೆ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮನೆಗಳನ್ನು ಕಳೆದು ಕೊಂಡಿರುವ ಸಂತಸ್ತರಿಗೆ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಿಂದ ಊಟದ ವ್ಯವಸ್ಥೆ ಮಾಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿ, ಸರ್ಕಾರಿ ಶಾಲೆಗಳಲ್ಲಿ ತಂಗಲು ಅವರಿಗೆ ವ್ಯವಸ್ಥೆ ಮಾಡಲು ಆದೇಶಿಸಿದರು.

Advertisement

ಸಂಸದ ಆರ್‌.ಧ್ರುವನಾರಾಯಣ, ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಅಧ್ಯಕ್ಷ ಬಿ.ಎಂ ಮಹದೇವಪ್ಪ, ಸದಸ್ಯರಾದ ಬಿ.ಎಸ್‌ ರಾಮು, ಶಿವಣ್ಣ  ಕೆ.ಬಿ.ಸ್ವಾಮಿ, ನಾಗರಾಜು, ಸಿದ್ದಶೆಟ್ಟಿ, ಮರಯ್ಯ, ಮಹದೇವು, ಸಂಜೀವಣ್ಣ, ಸೇರಿದಂತೆ ಹಲವು ಜನಪ್ರತಿನಿಧಿಗಳು ಹೆಡತಲೆ ಗ್ರಾಮಕ್ಕೆ ಭೇಟಿ ನೀಡಿದರು.

ನಂಜನಗೂಡು ನಗರದಲ್ಲೂ ರಾತ್ರಿಯಿಂದ ಮುಂಜಾನೆಯವರಿಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳೆಲ್ಲ ಕೊಚ್ಚಿ ಹೋಗಿ ರಸ್ತೆ ಕಾಮಗಾರಿಗಳ ನಿಜ ಬಣ್ಣ ಬಯಲಿಗೆ ಬಂದಿದೆ. ಪಟ್ಟಣದ ರಸ್ತೆಗಳೆಲ್ಲ ಒಂದೇ ಮಳೆಗೆ ಕೊರಕಲು ಬಿದ್ದ ಬೀದಿಗಳಾಗಿ ಸಾರ್ವಜನಿಕರು ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next