Advertisement

ಮಳೆ ಅವಾಂತರ ಮಾನವನಿಗೆ ಎಚ್ಚರಿಕೆ !

11:51 PM Aug 02, 2022 | Team Udayavani |

ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಅತಿಯಾಸೆಯಿಂದ ಪ್ರಕೃತಿನಾಶವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದು, ಆಯಾ ಋತುಗಳಲ್ಲಿ ಮನುಷ್ಯ ಇದರ ಪರಿಣಾಮವನ್ನು ಎದುರಿಸಬೇಕಾಗಿದೆ.

Advertisement

ದಶಕಗಳ ಹಿಂದೆಯೂ ಸಾಕಷ್ಟು ಮಳೆಯಾಗಿದೆ. ಆದರೆ ಪ್ರಕೃತಿ ಸಹಜವಾಗಿ ಹರಿಯುತ್ತಿದ್ದ ನದಿಗಳು, ಹೊಳೆಗಳು, ಹಳ್ಳ-ಕೊಳ್ಳಗಳು, ಬೆಟ್ಟ-ಗುಡ್ಡಗಳು, ಜಲಪಾತ, ಅರಣ್ಯಗಳು ಇದ್ದುದರಿಂದ ಎಷ್ಟೇ ಮಳೆ ಸುರಿದರೂ ಅದರ ಪರಿಣಾಮ ಮನುಷ್ಯರಿಗೆ ತಟ್ಟುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬೃಹದಾಕಾರದಲ್ಲಿ ನಡೆಯುತ್ತಿರುವ ನಗರೀಕರಣ, ಜಲಮೂಲಗಳ ಒತ್ತುವರಿ ಮತ್ತು ಅರಣ್ಯ ನಾಶ, ಮಾಲಿನ್ಯ ಹೆಚ್ಚಳ, ಕೈಗಾರೀಕರಣ ಸೇರಿದಂತೆ ಹಲವಾರು ಕಾರಣದಿಂದ ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಗಿದೆ. ನದಿ ಹರಿಯುವ ಜಾಗವನ್ನು ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ನೇರವಾಗಿ ಮಳೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ.

ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಬಿರು ಬೇಸಗೆ ಇರುತ್ತದೆ. ಆದರೆ ಈ ಬಾರಿಯ ಮೇ ತಿಂಗಳಿನಲ್ಲಿ 1972ರ ಬಳಿಕ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. 22.4 ಕನಿಷ್ಠ ತಾಪಮಾನಕ್ಕೆ ಕುಸಿದು ಬೇಸಗೆಯಲ್ಲಿ ಚಳಿಗಾಲದ ಅನುಭವವಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವು ಹೂ ಕಟ್ಟುವಿಕೆ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಈ ವರ್ಷ ಒಂದು ತಿಂಗಳು ತಡವಾಗಿ ಮಾವು ಮಾರುಕಟ್ಟೆಗೆ ಬಂದಿತ್ತು. ತೊಗರಿ, ಅವರೇ ಸೇರಿ ಇನ್ನಿತರ ಬೆಳೆಗಳ ಮೇಲೆ ಪರಿಣಾಮ ಬೀರಿತ್ತು.

ಇದೇ ಮೇ 16ರಂದು ಹೊಸದಿಲ್ಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್‌ ತಾಪಮಾನ ತಲುಪಿತ್ತು. ಈ ಸಂದರ್ಭದಲ್ಲಿ ಬೀಸಿದ ಬಿಸಿಗಾಳಿ, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಸುಮಾರು ದಿನಗಳ ಕಾಲ ಉತ್ತರ ಭಾರತ ರಾಜ್ಯಗಳಲ್ಲಿದ್ದ ಬಿಸಿಗಾಳಿ ಜನಜೀವನವನ್ನು ತಲ್ಲಣಗೊಳಿಸಿತ್ತು.

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಕೊಡಗಿನಲ್ಲಿ ನಿರಂತರವಾಗಿ ಗುಡ್ಡ ಕುಸಿತವಾಗುತ್ತಿದೆ. 2018ರ ಆಗಸ್ಟ್‌ನಲ್ಲಿ ಗುಡ್ಡ ಕುಸಿದು ಮಡಿಕೇರಿಯಲ್ಲಿ ಭಾರೀ ಅವಾಂತರವೇ ಆಗಿದ್ದು, ಮನೆಗಳು ಕೊಚ್ಚಿ ಹೋಗಿದ್ದು ಮಾತ್ರವಲ್ಲ, ಜಮೀನುಗಳ ಚಹರೆಯೇ ಬದಲಾಗಿತ್ತು. ಅದಾದ ಅನಂತರವೂ ನಿರಂತರವಾಗಿ ಪ್ರತೀ ವರ್ಷ ಸಣ್ಣ, ಪುಟ್ಟ ಗುಡ್ಡ ಕುಸಿತವಾಗುತ್ತಲೇ ಇದೆ. ಈ ವರ್ಷವೂ ಗುಡ್ಡ ಕುಸಿತದ ಪರಿಣಾಮ ಎದುರಿಸುತ್ತಿದ್ದೇವೆ.

ಹವಾಮಾನ ತಜ್ಞರು, ಮಳೆ ತಜ್ಞರು ಮತ್ತು ಸರಕಾರದ ಕಂದಾಯ ಇಲಾಖೆಗಳ ಪ್ರಕಾರ ಅರಣ್ಯದಲ್ಲಿರುವ ಮರಗಳ ಅತಿಯಾದ ಕಟಾವು, ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವುದು, ನಗರೀಕರಣದಿಂದ ಗುಡ್ಡಗಳ ಕುಸಿತವಾಗುತ್ತಿದೆ. ಮಣ್ಣಿನ ಸವಕಲು ಆಗುವುದರಿಂದ ಸುಲಭವಾಗಿ ಬೆಟ್ಟಗಳು, ಕಡಿದಾದ ಕಣಿವೆ ಪ್ರದೇಶಗಳು ನಿರಂತರವಾಗಿ ಕುಸಿತವಾಗುತ್ತಿದೆ. ಇದರ ನೇರವಾದ ಪರಿಣಾಮ ಮಳೆಗಾಲ, ಚಳಿಗಾಲ ಮತ್ತು ಬೇಸಗೆಕಾಲದ ಅವಧಿ ಏರುಪೇರಾಗಲು ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ವರ್ಷ ಪೂರ್ವ ಮುಂಗಾರಿನಿಂದಲೂ ಉತ್ತಮ ಮಳೆಯಾಗಿದೆ. ಜುಲೈನಲ್ಲಿ ಕೂಡ ಸಾಕಷ್ಟು ಮಳೆಯಾಗಿರುವುದರಿಂದ ಈಗಾಗಲೇ ರಾಜ್ಯದ ಬಹುತೇಕ ಅಣೆಕಟ್ಟುಗಳು ಭರ್ತಿಯಾಗಿವೆ. ಇದೀಗ ಮುಂದಿನ 4 ದಿನಗಳ ಕಾಲ ಹವಾಮಾನ ಇಲಾಖೆಯು ರೆಡ್‌ ಅಲರ್ಟ್‌ ನೀಡಿದೆ. ಅತಿಯಾದ ಮಳೆಯಾದರೆ, ಮತ್ತೊಮ್ಮೆ ಅಂತಹ ಅನಾಹುತಗಳು ಸಂಭವಿಸಿದರೂ ಅಚ್ಚರಿ ಇಲ್ಲ. ಮನುಷ್ಯ ಎಚ್ಚೆತ್ತುಕೊಂಡು ಪ್ರಕೃತಿಯನ್ನು ಗೌರವಿಸದಿದ್ದರೆ, ಮತ್ತಷ್ಟು ಪರಿಣಾಮವನ್ನು ಎದುರಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next