Advertisement

ಕೊಡಗಿನ ಗಡಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತ

11:35 PM Aug 04, 2022 | Team Udayavani |

ಮಡಿಕೇರಿ: ಮಹಾಮಳೆ ಮತ್ತು ಗುಡ್ಡ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಜಲಸ್ಫೋಟದಿಂದ ಕೊಡಗಿನ ಗಡಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಪಾಜೆ ಹಾಗೂ ಕಲ್ಲುಗುಂಡಿ ಭಾಗದಲ್ಲಿ ಪಯಸ್ವಿನಿ ನದಿ ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Advertisement

ನಿರಂತರ ಮಳೆೆಯ ರಭಸಕ್ಕೆ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ಜಲಸ್ಫೋಟದಿಂದ ಮನೆಗಳಿಗೆ ಹಾನಿಯಾಗಿದೆ. 24 ಗಂಟೆಗಳಲ್ಲಿ ಎಂಟು ಇಂಚಿಗೂ ಅಧಿಕ ಮಳೆಯಾಗಿದೆ. ಬೆಟ್ಟ ಪ್ರದೇಶದಲ್ಲಿ ಜಲಸ್ಫೋಟದಿಂದ ಕೆಸರು ಮಿಶ್ರಿತ ನೀರು ಗ್ರಾಮದ ಬಾಲಕೃಷ್ಣ ಅವರ ಮನೆಗೆ ನುಗ್ಗಿ ಸಾಕಷ್ಟು ಹಾನಿಯಾಗಿದೆ. ಸುತ್ತಮುತ್ತಲ ತೋಟ ಗಳಿಗೂ ಮಣ್ಣು ನುಗ್ಗಿದೆ. ಕೊಟ್ಟಿಗೆಯೊಂದು ನೆಲಸಮ ವಾಗಿದೆ. ಕೆಲವು ಕುಟುಂಬಗಳು ರಾತ್ರಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿವೆ.

ವಿವಿಧೆಡೆ ಬರೆ ಕುಸಿತ: ಸಂಪಾಜೆಯ ಕಲ್ಲಳ್ಳದ ಗಣಪತಿ ಅವರ ಮನೆ ಬಳಿ ಮತ್ತು ಮದೆ ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ರಸ್ತೆ ಯಲ್ಲಿ ಭಾರೀ ಪ್ರಮಾಣದಲ್ಲಿ ಬರೆ ಕುಸಿದಿದೆ. ಕರಿಕೆ ರಸ್ತೆಯ ಕೊಟ್ಟಮಲೆ, ಬಾಚಿಮಲೆ ವ್ಯಾಪ್ತಿಯಲ್ಲಿ ಭೂ ಕುಸಿತದಿಂದ ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಮಣ್ಣು, ಮರದ ರಾಶಿ ಬಿದ್ದಿದೆ. ತೆರವು ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ದ.ಕ. ಜಿಲ್ಲೆಯ ಸುಳ್ಯ ತಾಲೂಕಿಗೆ ಹೊಂದಿ ಕೊಂಡಿರುವ ಚೆಂಬು ಗ್ರಾಮದ ಊರುಬೈಲಿನಿಂದ ಸಂಪಾಜೆಗೆ ಸಂಪರ್ಕ ಕಲ್ಪಿಸುವ ಸೇತುವೆಯ ಪಾರ್ಶ್ವ ಕೊಚ್ಚಿ ಹೋಗಿದೆ. ಪಯಸ್ವಿನಿ ನದಿಯ ಪ್ರವಾಹದಿಂದ ಮಡಿಕೇರಿ-ಮಂಗಳೂರು ರಸ್ತೆಯ ಕೊಯನಾಡಿನ ಸೇತುವೆಯ ಒಂದು ಪಾರ್ಶ್ವಕ್ಕೆ ಹಾನಿಯಾಗಿದ್ದು, ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗುತ್ತಿದೆ.

 ಮಡಿಕೇರಿ-ಮಂಗಳೂರು:ಲಾರಿಗಳ ಸಂಚಾರ ನಿಷೇಧ :

Advertisement

ಮಡಿಕೇರಿ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿಯ ದೇವರಕೊಲ್ಲಿಯಲ್ಲಿ ರಸ್ತೆಯಲ್ಲಿ ಬೃಹತ್‌ ಬಿರುಕುಗಳು ಮೂಡಿವೆ ಮತ್ತು ಕೊಯನಾಡು ಸೇತುವೆ ಸಮೀಪ ರಸ್ತೆ ಕುಸಿದಿದೆ. ಈ ಕಾರಣದಿಂದ ಮುಂಜಾಗ್ರತ ಕ್ರಮವಾಗಿ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಸಂಪಾಜೆ, ಕಲ್ಲುಗುಂಡಿ ರಸ್ತೆ ಯಲ್ಲಿ ಮಡಿಕೇರಿ, ಮೈಸೂರು, ಚಾಮರಾಜನಗರ ಕಡೆಗೆ ತೆರಳಬೇಕಿದ್ದ ಪೆಟ್ರೋಲಿಯಂ, ಬುಲೆಟ್‌ ಟ್ಯಾಂಕರ್‌, ಪಶು ಆಹಾರ ಸಾಗಾಟ ಸೇರಿದಂತೆ ಇನ್ನಿತರ ಸರಕು ಸಾಗಿಸುವ ನೂರಾರು ಲಾರಿಗಳು ಸಾಲುಗಟ್ಟಿ ನಿಂತಿವೆ. ಏಕಾಏಕಿ ಸಂಪಾಜೆ ಚೆಕ್‌ ಪೋಸ್ಟ್‌ನಲ್ಲಿ ಲಾರಿಗಳನ್ನು ತಡೆಹಿಡಿದಿರುವುದರಿಂದ ನಮಗೆ ತೊಂದರೆಯಾಗಿದೆ ಎಂದು ಕೊಡಗು ಜಿಲ್ಲಾಡಳಿತದ ವಿರುದ್ಧ ಲಾರಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಣಿ ಚೆಕ್‌ ಪೋಸ್ಟ್‌ನಲ್ಲಿಯೇ ಸಂಪಾಜೆ-ಮಡಿಕೇರಿ ರಸ್ತೆ ಬಂದ್‌ ಎಂದು ಮಾಹಿತಿ ನೀಡಿದ್ದರೆ ಈ ರಸ್ತೆಯಲ್ಲಿ ಬರುತ್ತಿರಲಿಲ್ಲ. ಮಾಣಿ- ಶಿರಾಡಿ ಘಾಟಿ ಮಾರ್ಗವಾಗಿ ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿತ್ತು. ಡೀಸೆಲ್‌ಗೆ 97 ರೂ. ನೀಡಿ ಈಗಾಗಲೇ 100 ಕಿ.ಮೀ. ಕ್ರಮಿಸಿ ಸಂಪಾಜೆಗೆ ಬಂದಿದ್ದೇವೆ. ಈಗ ದಾರಿಯಲ್ಲಿ ತಡೆದು ಪರ್ಯಾಯ ರಸ್ತೆಯಲ್ಲಿ ಮರಳುವಂತೆ ತಾಕೀತು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next