ಹುಣಸೂರು: ಕೊಡಗಿನಲ್ಲಿ ಬ್ರಹ್ಮಗಿರಿ ತಪ್ಪಲು, ಇಪುì ಸುತ್ತಮುತ್ತ ಜೊತೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ವಿಶ್ವ ವಿಖ್ಯಾತ ನಾಗರಹೊಳೆಯ ವನ್ಯಜೀವಿ ದರ್ಶನದ ಸಫಾರಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಕಳೆದೊಂದು ತಿಂಗಳಿನಿಂದ ನಾಗರಹೊಳೆ ಉದ್ಯಾನವನದಲ್ಲಿ ಸಾಕಷ್ಟು ಮಳೆ ಬೀಳುತ್ತಿದ್ದು, ಉದ್ಯಾನದೊಳಗೆ ಸಫಾರಿ ವಾಹನಗಳು ಮಣ್ಣಿನ ರಸ್ತೆಯಲ್ಲಿ ತೆರಳಲು ಸಾಧ್ಯವಾಗದ ಕಾರಣ, ಕೊಡಗಿನ ಕುಟ್ಟ ಬಳಿಯ ನಾಣಚ್ಚಿಗೇಟ್, ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಗೇಟ್ ಹಾಗೂ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿಯಿಂದ ಹೊರಡುತ್ತಿದ್ದ ಸಫಾರಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಉದ್ಯಾನದಲ್ಲಿ ಹರಿಯುವ ಲಕ್ಷ್ಮಣತೀರ್ಥ, ನಾಗರಹೊಳೆ ನದಿಗಳು ತುಂಬಿವೆ. ಅಲ್ಲದೇ ಅರಣ್ಯದೊಳಗಿನ ತೋಡುಗಳಲ್ಲಿ ಸಹ ನೀರು ಹರಿದು ಕೆರೆ ಕಟ್ಟೆ ಸೇರುತ್ತಿದೆ. ಇದರಿಂದಾಗಿ ಉದ್ಯಾನವನದೊಳಗೆ ವಾಹನಗಳು ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಫಾರಿ ವಾಹನವು ನಾಗರಹೊಳೆ ವಲಯದೊಳಗಿರುವ ಸಫಾರಿ ಪ್ರದೇಶದಲ್ಲೇ ತೆರಳಬೇಕಿರುವುದರಿಂದ ಮೂರು ಕಡೆಗಳಿಂದಲೂ ಸಫಾರಿ ರದ್ದುಗೊಳಿಸಲಾಗಿದೆ. ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ವಿಖ್ಯಾತವಾಗಿರುವ ನಾಗರಹೊಳೆ ಉದ್ಯಾನದಲ್ಲಿ ಸಫಾರಿ ಮೂಲಕ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳ ವನ್ಯಜೀವಿ ಪ್ರೇಮಿಗಳು ಇಲ್ಲಿಗೆ ಆಗಮಿಸುತ್ತಾರೆ.
ಆದರೆ, ಮಳೆ ಇವರ ವನ್ಯಪ್ರೇಮಕ್ಕೆ ಅಡ್ಡಿಯಾಗಿದ್ದು, ಹಲವು ಮಂದಿ ವೀರನಹೊಸಹಳ್ಳಿ ಗೇಟ್‌ನಿಂದ ನಾಣಚ್ಚಿ ಗೇಟ್, ಬಾಳೆಲೆವರೆಗಿನ ಮುಖ್ಯರಸ್ತೆಯಲ್ಲೇ ತೆರಳಿ ರಸ್ತೆ ಆಜುಬಾಜಿನ ಮುಖ್ಯರಸ್ತೆಯಲ್ಲೇ ಸಿಗುವ ಪ್ರಾಣಿಗಳನ್ನು ನೋಡಿ ಸಂತಸ ಪಡುತ್ತಿದ್ದಾರೆ.
ಈ ನಡುವೆ ಮಳೆ ನಿಂತು ಒಣಹವೆ ಉಂಟಾದಲ್ಲಿ ಮಾತ್ರ ಸಫಾರಿಗೆ ಅನುವು ಮಾಡಿಕೊಡಲಾಗುತ್ತಿದೆ.
ನಾಗರಹೊಳೆ ಉದ್ಯಾನದ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದು, ಅರಣ್ಯದೊಳಗೆ ಸಫಾರಿ ವಾಹನಗಳು ಓಡಾಡಲಾಗದ ಪರಿಸ್ಥಿತಿ ಇದೆ. ಮೂರೂ ಕಡೆಯೂ ತಾತ್ಕಾಲಿಕವಾಗಿ ಸಫಾರಿ ರದ್ದುಪಡಿಲಾಗಿದೆ. ಮಳೆ ಕಡಿಮೆಯಾದಲ್ಲಿ ಮಾತ್ರ ಸಫಾರಿಗೆ ಅವಕಾಶ ಕಲ್ಪಿಸಲಾಗುವುದು.
-ನಾರಾಯಣಸ್ವಾಮಿ. ನಾಗರಹೊಳೆ ಉದ್ಯಾನವನದ ನಿರ್ದೇಶಕ