ಚಿಂಚೋಳಿ: ಕಳೆದೆರಡು ದಿನಗಳಿಂದ ಸಾಧಾರಣವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ಸಂಪೂರ್ಣ ಹದಗೆಟ್ಟಿರುವ ಗಣಾಪುರ-ಕರ್ಚಖೇಡ-ನಿಡಗುಂದಾ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳು ಸಿಲುಕಿಕೊಂಡಿದ್ದರಿಂದ ಸುಮಾರು ಐದಾರು ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸೇಡಂ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ಕುಂಚಾವರಂ-ಭಕ್ತಂಪಳ್ಳಿ-ಗಣಾಪುರ -ಬುರುಗಪಳ್ಳಿ, ಚತ್ರಸಾಲ-ನಿಡಗುಂದಾ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಲ್ಲಲ್ಲಿ ದೊಡ್ಡ ತಗ್ಗುಗಳು ಬಿದ್ದಿವೆ. ಈ ತೆಗ್ಗುಗಳಲ್ಲಿ ಮಳೆ ನೀರು ನಿಂತಿದ್ದರಿಂದ ಆಳದ ಅರಿವು ಇಲ್ಲದ ವಾಹನ ಸವಾರರು ಸಿಲುಕಿಕೊಂಡು ಪರದಾಡುವಂತೆ ಆಗಿದೆ. ಬೈಕ್ ಸವಾರರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ.
ಗಣಾಪುರ ಗ್ರಾಮದ ಐತಿಹಾಸಿಕ ಸಂಗಮೇಶ್ವರ ದೇವಸ್ಥಾನ ಬಳಿ ಸೇತುವೆ ಹತ್ತಿರ ಭಾರಿ ತಗ್ಗು ಬಿದ್ದಿದ್ದು ಲಾರಿಯೊಂದು ಸಿಲುಕಿದ್ದರಿಂದ ಛತ್ರಸಾಲ ಸಿಮೆಂಟ್ ಕಂಪನಿಯಿಂದ ಬೇರೆಡೆ ಹೋಗುವ ಲಾರಿಗಳು ರಸ್ತೆಯಲ್ಲೇ ನಿಲ್ಲುವಂತಾಗಿತ್ತು. ಪಟ್ಟಣದ ಚಂದಾಪುರ ನಗರದಲ್ಲಿ ಮಧ್ಯಾಹ್ನ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ಮಳೆಯಲ್ಲೇ ಶಾಲೆ-ಕಾಲೇಜು ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದರು. ತಾಂಡೂರ ಕ್ರಾಸ್‌ನಲ್ಲಿ ಬಸ್ ಶೆಲ್ಟರ್ ಇಲ್ಲದ್ದರಿಂದ ಮಳೆಯಲ್ಲಿಯೇ ನಿಲ್ಲುವಂತಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಮುಂಗಾರು ಬೆಳೆಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಹೆಸರು, ಉದ್ದು, ತೊಗರಿ, ಸೋಯಾಬಿನ್, ಸಜ್ಜೆ, ನವಣಿ, ಹೈಬ್ರಿಡ್ ಜೋಳ ಸೇರಿದಂತೆ ಮುಂಗಾರು ಬೆಳೆಗಳು ನಳನಳಿಸುತ್ತಿವೆ. ಸುಲೇಪೇಟ, ಕೋಡ್ಲಿ, ಚಿಮ್ಮನಚೊಡ,ನಿಡಗುಂದಾ, ಕೊರವಿ, ಚಿಂಚೋಳಿ, ಕುಂಚಾವರಂ, ಸಾಲೇಬೀರನಳ್ಳಿ, ಹಸರ ಗುಂಡಗಿ, ಚಂದನಕೇರಾ ಗ್ರಾಮಗಳಲ್ಲಿ ಹೆಸರು , ಉದ್ದು. ತೊಗರಿ ಬೆಳೆಗಳು ಸಮ್ಮದ್ಧಿಯಾಗಿ ಬೆಳೆದಿರುವುದರಿಂದ ರೈತರು ಬೆಳೆಯಲ್ಲಿ ಎಡೆ ಹೊಡೆಯುತ್ತಿದ್ದಾರೆ. ಹುಲ್ಲು ಕೀಳುವುದು. ಕೀಟ ನಾಶಕ ಸಿಂಪರಣೆ ನಡೆಸಲಾಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.