Advertisement

ಆಟಿ ತಿಂಗಳು: ಭರ್ಜರಿ ಮಳೆ ಆರಂಭ

04:20 AM Jul 19, 2017 | Karthik A |

ಪುತ್ತೂರು: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಆರಂಭಗೊಂಡ ಬಿರುಸಿನ ಮಳೆ ಮಂಗಳವಾರ ಮಧ್ಯಾಹ್ನ ದವರೆಗೂ ಸುರಿದಿದೆ. ತಾಲೂಕಿನ ನಗರ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 27 ಮಿ.ಮೀ. ಮಳೆ ಸುರಿದಿದೆ.

Advertisement

ಆಟಿ ಉತ್ತಮ ಆರಂಭ
ಸೋಮವಾರ ತುಳುವಿನ ಆಟಿ ತಿಂಗಳು ಆರಂಭಗೊಂಡಿದ್ದು, ಅದಕ್ಕೆ ಭರ್ತಿ ಮಳೆ ಸ್ವಾಗತ ನೀಡಿದೆ. ಆಟಿ ತಿಂಗಳಲ್ಲಿ ಮಳೆ ಬರಲು ಆರಂಭವಾದರೆ ಹೊರಗೆ ಕಾಲಿಡಲೂ ಸಾಧ್ಯವಾಗದಂತಹ ಮಳೆ ಬರುತ್ತದೆ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಈ ಕಾರಣದಿಂದ ಆಟಿಯಲ್ಲಿ ಬಾಧಿಸುವ ರೋಗ ರುಜಿನಗಳ ಮಾರಿ ಓಡಿಸುವ ಆಟಿ ಕಳೆಂಜ, ಆಟಿ ಅಮಾವಾಸ್ಯೆಗೆ ಔಷಧ ಯುಕ್ತವಾದ ಹಾಲೆಮರದ ತೊಗಟೆಯ ರಸ ಕುಡಿಯುವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿದೆ.

ಸುಳ್ಯ: ಭಾರೀ ಮಳೆ
ಸುಳ್ಯ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನವರೆಗೆ ಭಾರೀ ಮಳೆಯಾಗಿದೆ. ಅಪರಾಹ್ನ ಬಳಿಕ ಮೋಡ- ಬಿಸಿಲಿನ ವಾತಾವರಣದೊಂದಿಗೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆಗಾಗ್ಗೆ ಗಾಳಿ ಸಹಿತ ಹನಿ ಮಳೆಯಾಗುತ್ತಿತ್ತು. ಸೋಮವಾರ ರಾತ್ರಿ ತಾಲೂಕಿನ ಹಲವೆಡೆ ಅಲ್ಪಸ್ವಲ್ಪ ಮಳೆಯಾಗಿತ್ತು. ಮಳೆಯಿಂದಾಗಿ ಹಾನಿಯಾದ ಬಗ್ಗೆ ತಿಳಿದುಬಂದಿಲ್ಲ.

ಮಳೆ ಪ್ರಮಾಣ
ಕಳೆದ 24 ಗಂಟೆಗಳಲ್ಲಿ ತಾಲೂಕಿನಲ್ಲಿ  26.6 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷ ಇದೇ ದಿನದಂದು ಅತೀ ಕಡಿಮೆ 4.3 ಮಿ.ಮೀ. ಮಳೆಯಾಗಿತ್ತು. ಜುಲೈ ಆರಂಭದಿಂದ ಇದುವರೆಗೆ 472.8 ಮಿ.ಮೀ. ಮಳೆಯಾಗಿದ್ದರೆ ಕಳೆದ ಬಾರಿ ಇದೇ ದಿನಾಂಕಕ್ಕೆ 563.4 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇದುವರೆಗೆ  ತಾಲೂಕಿನಲ್ಲಿ ಒಟ್ಟು 1,434.4ಮಿ.ಮೀ. ಮಳೆಯಾಗಿದೆ. ಕಳೆದ ಬಾರಿ ಇದೇ ದಿನದಂದು 1,564.2 ಮಿ.ಮೀ. ಮಳೆ ದಾಖಲಾಗಿತ್ತು.

ಸೇತುವೆ ಮುಳುಗಡೆ
ಸೋಮವಾರ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನದ ತನಕ ಉತ್ತಮ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ತಾಲೂಕಿನ ಇರ್ದೆ ಚೆಲ್ಯಡ್ಕದ ಹಾಗೂ ಪಳ್ಳತ್ತೂರಿನ ಮುಳುಗು ಸೇತುವೆಗಳು ಸ್ವಲ್ಪ ಸಮಯದವರೆಗೆ ಮುಳುಗಡೆಯಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಾಗಿವೆ. ಮಂಗಳವಾರ ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾದ ಕಾರಣ ನೀರು ಇಳಿಕೆಯಾಗಿ ಸಂಚಾರ ಯಥಾಸ್ಥಿತಿಗೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next