Advertisement
ಪ್ರಮುಖ ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತೀರ ಪ್ರದೇಶದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
Related Articles
ಮೈಸೂರು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಮುಳುಗಿದೆ. ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.
ಕೆಆರ್‌ಎಸ್ ಜಲಾಶಯವು ಒಂದು ವಾರದಲ್ಲಿ ಭರ್ತಿ ಯಾಗುವ ಸಾಧ್ಯತೆ ಇದೆ. ಕೃಷ್ಣಾ, ವೇದಗಂಗಾ, ದೂಧ ಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಾ, ಭದ್ರಾ, ಹೇಮಾವತಿ, ಕಾಳಿ, ಶರಾವತಿ, ಗಂಗಾವಳಿ, ಅಘನಾಶಿನಿ ನದಿಗಳು, ಧಾರವಾಡ ಜಿಲ್ಲೆಯ ತುಪ್ಪರಿ, ಬೆಣ್ಣಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
Advertisement
ತುಂಗಾ, ನಾರಾಯಣಪುರ, ನವಿಲುತೀರ್ಥ, ಧೂಪದಾಳ, ಕದ್ರಾ ಜಲಾಶಯಗಳು ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ವಿಶ್ವವಿಖ್ಯಾತ ಜೋಗ ಮತ್ತು ಗೋಕಾಕ ಜಲಪಾತ ಮೈದುಂಬಿವೆ. ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡದ ಘಟ್ಟದ ಮೇಲ್ಭಾಗದಲ್ಲಿ ವ್ಯಾಪಕ ಮಳೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬಾ ದೇವಾಲಯ ಸಮೀಪದ ಕಪ್ಪೆ ಶಂಕರ ಮಂಟಪ, ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಟಾಳ ಸೇತುವೆ ಮುಳುಗಡೆಯಾಗಿದೆ.
ಮಹಾ ಮಳೆಗೆ ಪ್ರವಾಹ
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಮತ್ತೆ ನೆರೆ ಉಂಟಾಗಿದೆ. ಚಿಕ್ಕೋಡಿ ಬಳಿ ಕೃಷ್ಣಾ ನದಿಗೆ 1.32 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಯ ಮಟ್ಟದಲ್ಲಿ 10 ಅಡಿಗಳಷ್ಟು ಏರಿಕೆಯಾಗಿದೆ. ಎನ್‌ಡಿಆರ್‌ಎಫ್ ತಂಡ ನದಿ ತೀರದಲ್ಲಿ ಬೀಡು ಬಿಟ್ಟಿದೆ. ಕೋಯ್ನಾ, ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ನೀರು ಹರಿದು ಬರುತ್ತಿರುವುದರಿಂದ ಬಾಗಲಕೋಟೆ, ಜಮಖಂಡಿ, ಬೀಳಗಿ, ಹುನಗುಂದ, ವಿಜಯಪುರ, ರಾಯಚೂರು, ಯಾದಗಿರಿ ಮೊದಲಾದೆಡೆಯಲ್ಲೂ ನೆರೆ ಭೀತಿ ಎದುರಾಗಿದೆ. ತತ್‌ಕ್ಷಣ ಪರಿಹಾರ: ಸಿಎಂ
ಮಳೆಯಿಂದ ಹಾನಿ ಗೊಳಗಾದ ಕುಟುಂಬಗಳಿಗೆ ತತ್‌ಕ್ಷಣ 10,000 ರೂ. ಪರಿಹಾರದ ಜತೆಗೆ ಸಂಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ ರೂ. ಪರಿಹಾರ ನೀಡುವಂತೆ ಸಿಎಂ ಬಿಎಸ್‌ವೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಳ್ಳಿಗಳ ಶಾಲಾ-ಕಾಲೇಜುಗಳನ್ನೇ ನಿರಾಶ್ರಿತರ ಕೇಂದ್ರವನ್ನಾಗಿಸಿ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಆದೇಶ ನೀಡಿದ್ದಾರೆ.
ಕರಾವಳಿಯಲ್ಲೂ ಮಳೆ ಜೋರು
ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಅಪರಾಹ್ನದ ಬಳಿಕ ಬಿರುಸುಗೊಂಡಿತ್ತು. ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವೆಡೆ ಹಾನಿ ಉಂಟಾಗಿದೆ. ಭಾರೀ ಮಳೆಯಿಂದ ಅವಿಭಜಿತ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿ ಉಂಟಾಗಿದೆ. ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿಯೂ ಭಾರೀ ಮಳೆಯಾಗುತ್ತಿದೆ. ಸುಬ್ರಹ್ಮಣ್ಯದ ಬಿಸಿಲೆ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಕೆಲವು ಕಡೆಗಳಲ್ಲಿ ರಸ್ತೆಗೆ ಮರಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕುಸಿದ ಕೊಂಕಣ ರೈಲ್ವೇ ಸುರಂಗ
ಭಾರೀ ಮಳೆಯಿಂದ ಕೊಂಕಣ ರೈಲ್ವೇಯ ಕಾರವಾರ ವ್ಯಾಪ್ತಿಯ ಪೆರ್ನೆಮ್ ಸುರಂಗ ಕುಸಿದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಳೆ ಏಕೆ?
ಬಂಗಾಲ ಕೊಲ್ಲಿಯಲ್ಲಿ ನಿಮ್ನ ಒತ್ತಡ ಉಂಟಾಗಿ ಮುಂಗಾರು ಮಾರುತಗಳು ಚುರುಕಾಗಿರುವುದು. ರೆಡ್ ಅಲರ್ಟ್: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಎಷ್ಟು ದಿನ?
ಹವಾಮಾನ ಇಲಾಖೆ ಪ್ರಕಾರ ಆ.10ರ ವರೆಗೂ ಮಳೆ ಮುಂದುವರಿಯಲಿದೆ.