Advertisement

ಮೂಳೂರು: 40 ಮನೆಗಳಿಗೆ ಕೃತಕ ನೆರೆ ನೀರು

06:00 AM Jun 24, 2018 | Team Udayavani |

ಕಾಪು: ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶುಕ್ರವಾರ ರಾತ್ರಿ ಮೂಳೂರು ಮಹಾಲಕ್ಷ್ಮೀ ನಗರ ಕಾಲನಿಯ 35 -40 ಮನೆಗಳ ಒಳಗೆ ಕೃತಕ ನೆರೆ ನೀರು ನುಗ್ಗಿದೆ.

Advertisement

ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ಮಹಾಲಕ್ಷ್ಮೀ ನಗರ ಪಕ್ಕದಲ್ಲಿ ಹಲವು ಹೊಂಡಗಳನ್ನು ತೋಡಿ ಗ್ಲಾಸ್‌ ಹೊಗೆ (ಮರಳು) ತೆಗೆಯಲಾಗಿದ್ದು, ಹೊಂಡಗಳನ್ನು ಮುಚ್ಚದ ಕಾರಣ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. ಚರಂಡಿಗಳು ಇಲ್ಲದೆ ಕೃತಕ ನೆರೆಯಾಗಿ ತಗ್ಗು ಪ್ರದೇಶ ದಲ್ಲಿರುವ ಕಾಲನಿಯ ಮನೆಗಳತ್ತ ನುಗ್ಗಿ ಭೀತಿ ಮೂಡಿಸುತ್ತದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳೂ ಇವೆ. ಹಲವು ವರ್ಷಗಳಿಂದ ಈ ಹೊಂಡಗಳಿದ್ದರೂ ನೀರು ಹರಿಯಲು ವ್ಯವಸ್ಥೆ ಇದ್ದ ಕಾರಣ  ಸಮಸ್ಯೆಯಾಗಿರಲಿಲ್ಲ. ಈಗ ಕಾಲನಿಯ ಹೊರಭಾಗದಲ್ಲಿ ವಸತಿ ಹೆಚ್ಚುತ್ತಿದ್ದು, ನೀರು ಹರಿಯುವ ದಾರಿಗಳೆಲ್ಲ ಬಂದ್‌ ಆಗಿವೆ. ಇನ್ನೂ ಎರಡು ದಿನ ಮಳೆ ಸುರಿದರೆ ಕುಡಿಯುವ ನೀರಿಗೂ ತೊಂದರೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಕಾಲನಿ ನಿವಾಸಿಗಳು.

ಸ್ಪಂದನೆಯೇ ಇಲ್ಲ
ಕಾಲನಿಯ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸಿಸುತ್ತಿರುವವರ ಬದುಕು ದುಸ್ತರವಾಗಿದೆ. ಕೃತಕ ನೆರೆಯಿಂದಾಗಿ ಪ್ರತೀ ವರ್ಷ ಮನೆಗಳು ಜಲಾವೃತಗೊಳ್ಳುತ್ತಿವೆ. ದೂರು ಕೊಟ್ಟರೂ ಯಾರೂ ಸ್ಪಂದಿಸಿಲ್ಲ. ಕಾಲನಿ ಅಭಿವೃದ್ಧಿಗಾಗಿ ಬಿಡುಗಡೆಗೊಳ್ಳುತ್ತಿರುವ ಸರಕಾರದ ಅನುದಾನವೂ ಪೋಲಾಗುತ್ತಿದೆ ಎಂದು ಪ್ರಭಾತ್‌ ಶೆಟ್ಟಿ ಆರೋಪಿಸಿದ್ದಾರೆ.

ಮುಖ್ಯಾಧಿಕಾರಿ ಭೇಟಿ
ಕಾಲನಿ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಶನಿವಾರ ಭೇಟಿ ಕೊಟ್ಟು, ಜಮೀನು ಮಾಲಕರ ಜತೆ ಚರ್ಚಿಸಿದರು. ತಾತ್ಕಾಲಿಕವಾಗಿ ನೀರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಭಯದಲ್ಲೇ ಜೀವನ
35 ವರ್ಷಗಳಿಂದ 45 ಕುಟುಂಬದ ವರು ಇಲ್ಲಿ ವಾಸಿಸುತ್ತಿದ್ದೇವೆ. ಮಳೆಗಾಲದಲ್ಲಿ ಭಯದಲ್ಲೇ ದಿನ ಕಳೆಯುತ್ತಿದ್ದೇವೆ. ಹೊಗೆ ತೆಗೆದ ಗುಂಡಿ ಮುಚ್ಚಿಲ್ಲ. ಗುಂಡಿಗೆ ಮಗು ಬಿದ್ದು ಮೃತಪಟ್ಟ ಮೇಲೆ ನಾವು ಮಕ್ಕಳ ಬಗ್ಗೆ ತುಂಬಾ ಎಚ್ಚರ ವಹಿಸುತ್ತಿದ್ದೇವೆ.
ಲಕ್ಷ್ಮೀ ಬಂಗೇರ, ಕಾಲನಿ ನಿವಾಸಿ

Advertisement

ತಾತ್ಕಾಲಿಕ ಪರಿಹಾರ
ಪುರಸಭೆಯ ಮೂರನೇ ವಾರ್ಡ್‌ನ ಮಹಾಲಕ್ಷ್ಮೀ ನಗರ ಕಾಲನಿಯ ಜನತೆ ಪ್ರತೀ ಮಳೆಗಾಲದಲ್ಲೂ ಕೃತಕ ನೆರೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಖಾಸಗಿ ಜಮೀನುದಾರರು ನೀರು ಹರಿದು ಹೋಗಲು ಪೂರಕ ವ್ಯವಸ್ಥೆ ಮಾಡಿಕೊಟ್ಟಿದ್ದರೂ ಶಾಶ್ವತ ಪರಿಹಾರ ಆಗಿಲ್ಲ. ಸ್ಥಳೀಯರು, ಖಾಸಗಿ ಜಮೀನುದಾರರು ಮತ್ತು ಪುರಸಭೆ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದ್ದು, ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ.
ಶಾಂಭವಿ ಕುಲಾಲ್‌, ಪುರಸಭಾ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next