Advertisement
ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ, ಸೀರೆ ಹೊಳೆಗಳು ತುಂಬಿ ಹರಿದಿದ್ದು, ಹಳ್ಳ, ತೋಡುಗಳು ನೀರಿನಿಂದ ತುಂಬಿಕೊಂಡಿವೆ. ಬುಧವಾರ ಅಪರಾಹ್ನದಿಂದ ಗುರುವಾರ ಮಧ್ಯಾಹ್ನದ ತನಕವೂ ಉತ್ತಮ ಮಳೆಯಾಗಿದೆ. ರಸ್ತೆಗಳಲ್ಲಿ ಚರಂಡಿ ಅವ್ಯವಸ್ಥೆಯ ಕಾರಣದಿಂದ ನೀರು ಹರಿಯುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂದಿದೆ. ಮಳೆಯಿಂದ ಹೆಚ್ಚು ತೊಂದರೆಯಾಗುವ ಕಡೆಗಳಲ್ಲಿ ಶಾಲೆಗಳಿಗೆ ಆಡಳಿತ ಮಂಡಳಿಗಳು ರಜೆ ನೀಡಿವೆ.
ಪುತ್ತೂರು ನಗರದಲ್ಲಿ 113 ಮಿ.ಮೀ., ಉಪ್ಪಿನಂಗಡಿಯಲ್ಲಿ 134.06 ಮಿ.ಮೀ., ಶಿರಾಡಿಯಲ್ಲಿ 60.03 ಮಿ.ಮೀ., ಕೊಯಿಲದಲ್ಲಿ 117. 4 ಮಿ.ಮೀ., ಐತೂರುನಲ್ಲಿ 125 ಮಿ.ಮೀ., ಕಡಬದಲ್ಲಿ 146 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು 696.3 ಮಿ.ಮೀ. ಹಾಗೂ 116 ಮಿ.ಮೀ. ಸರಾಸರಿ ಮಳೆಯಾಗಿದೆ. ನೇತ್ರಾವತಿ ಕುಮಾರಧಾರಾ ಸಂಗಮದ ಉಪ್ಪಿನಂಗಡಿ ಸ್ಥಳದಲ್ಲಿ ನೀರಿನ ಮಟ್ಟ 20 ಮೀ. ದಾಖಲಾಗಿದೆ. ತಾಲೂಕಿನ ಸರ್ವೆ ಗ್ರಾಮದಲ್ಲಿ ರೈತರೊಬ್ಬರ ಭತ್ತದ ಗದ್ದೆಗೆ ನೀರು ನುಗ್ಗಿ 50 ಸಾವಿರ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಎರಡು ದಿನಗಳ ಅವಧಿಯಲ್ಲಿ 51 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಂದಾಜು 7.5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಸುಳ್ಯ: ತಾಲೂಕಿನಲ್ಲಿ ಗುರುವಾರ ಬೆಳಗ್ಗಿನ 24 ತಾಸು ಅಂತ್ಯಕ್ಕೆ 160.8 ಮಿ.ಮೀ ಮಳೆ ದಾಖಲಾಗಿದೆ. ಈ ವರ್ಷ ಮಳೆ ಆರಂಭಗೊಂಡ ಅನಂತರದ ಗರಿಷ್ಟ ಪ್ರಮಾಣದ ಮಳೆ ಇದಾಗಿದೆ. ಬೆಳ್ಳಾರೆ, ಸುಬ್ರಹ್ಮಣ್ಯ, ಜಾಲ್ಸೂರು, ಅರಂತೋಡು ಜಿ.ಪಂ ಕ್ಷೇತ್ರದ ವ್ಯಾಪ್ತಿಯ ನಾನಾ ಭಾಗದಲ್ಲಿ ಮಳೆ ಬುಧವಾರ ರಾತ್ರಿಯಿಡಿ ಉತ್ತಮ ಮಳೆಯಾಗಿದೆ. ಗುರುವಾರ ಮಧ್ಯಾಹ್ನ ತನಕ ಮಳೆಯಾಗಿದ್ದು, ದಿನವಿಡಿ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಕನಕಮಜಲಿನ ಮುಹಿಯ್ಯುದ್ದಿನ್ ಮಸೀದಿ ಕಂಪೌಂಡ್ ಕುಸಿದು ಚರಂಡಿ ಬ್ಲಾಕ್ ಆಗಿತ್ತು. ಅನಂತರ ಸ್ಥಳೀಯರು ಚರಂಡಿ ದುರಸ್ತಿ ಕಾರ್ಯ ನಡೆಸಿದರು.
Advertisement