ಅಂಕೋಲಾ: ತಾಲೂಕಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಗೆ 30ಕ್ಕೂ ಹೆಚ್ಚಾ ಮನೆಗಳಿಗೆ ನೀರು ನುಗ್ಗಿ ಬಟ್ಟೆ, ಬೆಳೆಕಾಳು, ಇನ್ನಿತರ ಸಾಮಗ್ರಿಗಳು ನೀರಲ್ಲಿ ತೋಯ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಪುರಸಭೆ ವ್ಯಾಪ್ತಿಯ ಕೇಣಿ, ಶಿರಕುಳಿ, ಭಾಗಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿಯ ನಿವಾಸಿಗಳು ಮನೆಯ ಸಾಮಗ್ರಿಗಳನ್ನು ಬೇರೆಡೆ ಸಾಗಿಸಿದ್ದಾರೆ.
ಬಂಟ ಕೇಣಿಯ ಆಶ್ರಯ ಕಾಲನಿಯಲ್ಲಿ ಸುಮಾರು 18 ಮನೆಗಳಿಗೆ ನೀರು ನುಗ್ಗಿ, ಆಹಾರಧಾನ್ಯಗಳು ನೀರಿಗೆ ಹಾಳಾಗಿವೆ. ಚರಂಡಿಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಪುರಸಭೆಯವರು ತೆರವುಗೊಳಿಸದೇ ಇರುವ ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ನೀರು ಮನೆಗಳಿಗೆ ನುಗ್ಗಿ ಅವಾಂತರಕ್ಕೆ ಕಾರಣವಾಯಿತು.
ಮುಖ್ಯಾಧಿಕಾರಿಗಳು ಪುರಸಭೆಯ ಸಿಬ್ಬಂದಿ ಬಳಸಿಕೊಂಡು ತಾವೆ ಮುಂದೆ ನಿಂತು ಚರಂಡಿಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಮೇಲೆತ್ತಿ ನೀರು ಹರಿದುಹೋಗುವಂತೆ ಕ್ರಮ ಕೈಗೊಂಡರು.
ಗ್ರಾಮದ ಪ್ರಮುಖರಾದ ಪುರಸಭೆ ಮಾಜಿ ಸದಸ್ಯೆ ಸೀಮಾ ಬಂಟ, ಸುದೀಪ ಬಂಟ, ಪ್ರಜ್ಞಾ ಬಂಟ, ಗಣೇಶ ಬಂಟ, ಲಂಬೋಧರ ಬಂಟ, ಗೌತಮ ಬಂಟ, ಸುರೇಶ ಬಂಟ, ಸಂತೋಷ ಬಂಟ, ಸುಲೋಚನಾ ಬಂಟ, ಉಜ್ವಲಾ ಬಂಟ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಕಂದಾಯ ನೀರಿಕ್ಷಕ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಾಧಿಕಾರಿ ಭಾರ್ಗವ ನಾಯಕ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ರಾ.ಹೆ 66 ಹಾಗೂ 63 ರ ಕೂಡುವ ಬಾಳೆಗುಳಿಯಲ್ಲಿ ಐಆರ್‌ಬಿ ಕಂಪನಿಯವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಯ ನೀರು ಹೆದ್ದಾರಿ ನುಗ್ಗಿ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಿತ್ತು. ಹೆದ್ದಾರಿಯಲ್ಲೆ ನೀರು ನಿಂತಿರುವ ಪರಿಣಾಮ, ವಾಹನಗಳು ಬದಲಿ ರಸ್ತೆಯಿಂದ ಸಂಚಾರಿಸಿದವು.
ತಹಶೀಲ್ದಾರ್ ಅಶೋಕ ಗುರಾಣಿ ನೇತೃತ್ವದ ಪ್ರಕೃತಿ ವಿಕೋಪ ನಿರ್ವಹಣಾ ತಂಡವು ನೆರೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.