ಗದಗ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 124.2 ಮಿ.ಮೀನಷ್ಟು ಮಳೆ ದಾಖಲಾಗಿದೆ. ಸತತ ಮೂರ್‍ನಾಲ್ಕು ಗಂಟೆ ಸುರಿದ ಬಿರುಸಿನ ಮಳೆಯಿಂದಾಗಿ ಗದಗ- ಬೆಟಗೇರಿ ಅವಳಿ ನಗರದ ತೆಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಆರಂಭಗೊಂಡ ಮಳೆ ಬೆಳಗಿನ ಜಾವ 3 ಗಂಟೆವರೆಗೂ ಬಿರುಸಿನಿಂದ ಮಳೆ ಸುರಿಯಿತು. ಪರಿಣಾಮ ನಗರದ ಬಹುತೇಕ ಚರಂಡಿಗಳು ಉಕ್ಕಿ ಹರಿದವು. ಗಂಗಿಮಡಿ, ಹೊಂಬಳ ನಾಕಾ ಜನತಾ ಕಾಲೋನಿ, ಅಂಬೇಡ್ಕರ್ ಬಡಾವಣೆ ಸೇರಿದಂತೆ ಖಾನತೋಟ, ಬೆಟಗೇರಿಯ ಕೊಳಗೇರಿ ಪ್ರದೇಶಗಳಲ್ಲಿ ಮಳೆ ಹಾಗೂ ಚರಂಡಿ ನೀರು ಮನೆಗೆ ನುಗ್ಗಿವೆ. ಮಳೆ ನೀರು ಮನೆಯೊಳಗೆ ಹರಿದು ಬರುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು, ಕಾಳು, ಕಡಿ ಸೇರಿದಂತೆ ಅಗತ್ಯ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು.
ಈ ನಡುವೆ ಭಾರೀ ಮಳೆಯಿಂದಾಗಿ ಕೊಳಗೇರಿ ಬಡಾವಣೆಯ ರಸ್ತೆಗಳು ನೀರಿನಿಂದ ತುಂಬಿಕೊಂಡಿದ್ದರಿಂದ ಕ್ರಮೇಣ ಮನೆಗಳಿಗೆ ನುಗ್ಗಿವೆ. ಗಂಗಿಮಡಿ ಬಡಾವಣೆಯ ರೈಲ್ವೆ ಗೇಟ್ ಭಾಗದಲ್ಲಿನ ಸುಮಾರು 500ಕ್ಕೂ ಹೆಚ್ಚು ಮನೆಗಳಲ್ಲಿ ಒಂದೆರಡು ಅಡಿಯಷ್ಟು ನೀರು ನಿಂತಿದ್ದವು. ಇನ್ನುಳಿದಂತೆ ಬಡಾವಣೆಯ ಬಹುತೇಕ ಮನೆಗಳು ಜಲಾವೃತಗೊಂಡಿದ್ದವು.
ಬೆಳಗಿನ ಜಾವ ಮಳೆ ಕಡಿಮೆಯಾಗುತ್ತಿದ್ದಂತೆ ಮನೆಯಲ್ಲಿ ಆವರಿಸಿದ್ದ ನೀರನ್ನು ಹೊರ ಚೆಲ್ಲಿದರು. ಈ ನಡುವೆ ರಾತ್ರಿ ಇಡೀ ಮಕ್ಕಳು, ಮರಿಯೊಂದಿಗೆ ಜಾಗರಣೆ ಮಾಡಿದರು. ಕೆಲವರು ಸಮೀಪದ ದೇವಸ್ಥಾನಗಳಲ್ಲಿ ಆಶ್ರಯ ಪಡೆಯುವಂತಾಯಿತು ಎನ್ನುತ್ತಾರೆ ಬಡಾವಣೆಯ ನಿವಾಸಿ ಅನ್ವರ್ ಶಿರಹಟ್ಟಿ.
ಗಂಗಿಮಡಿಯಲ್ಲಿ ಚರಂಡಿಗಳೇ ಇಲ್ಲ!: ಗಂಗಿಮಡಿ ಬಡಾವಣೆಯಲ್ಲಿ ಮುಖ್ಯ ರಸ್ತೆ ಹೊರತಾಗಿ ಎಲ್ಲೂ ರಸ್ತೆ, ಚರಂಡಿ ಸೌಲಭ್ಯಗಳಿಲ್ಲ. ಬಡಾವಣೆಯ ವಿವಿಧೆಡೆ ವರ್ಷದ ಹಿಂದೆ ಆರಂಭಗೊಂಡಿದ್ದ ಚರಂಡಿ ನಿರ್ಮಾಣ ಇನ್ನೂ ಮುಗಿದಿಲ್ಲ. ಒಳಚರಂಡಿ ಕಾಮಗಾರಿ ಮ್ಯಾನ್ ಹೋಲ್‌ಗಳು ಅಲ್ಲಲ್ಲಿ ಬಾಯೆ¤ರೆದು ಕುಳಿತಿವೆ. ಕೆಲವೆಡೆ ಮಳೆ ನೀರು ನಿಂತಿದ್ದರಿಂದ ರಸ್ತೆ ಎನ್ನುವುದೇ ಗೊತ್ತಾಗುವುದಿಲ್ಲ. ಅಲ್ಲಲ್ಲಿ ಹಾಗೇ ಬಿಟ್ಟಿರುವ ಒಳಚರಂಡಿ ಮ್ಯಾನ್ ಹೋಲ್‌ಗಳಿಂದಾಗಿ ಸ್ವಲ್ಪ ಎಚ್ಚರ ತಪ್ಪಿದರೂ, ಮ್ಯಾನ್‌ಹೋಲ್‌ನಲ್ಲಿ ಬೀಳುವುದು ನಿಶ್ಚಿತ. ಚರಂಡಿಗಳನ್ನು ನಿರ್ಮಿಸುವಂತೆ ನಗರಸಭೆಯ ಹಿಂದಿನ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ.
ಹೀಗಾಗಿ ಮಳೆ ಬಂದರೆ, ಸಾಕು ಜೀವನವೇ ಸಾಕು ಎನ್ನುವಂತಾಗುತ್ತದೆ. ಇಷ್ಟಾದರೂ, ನಗರಸಭೆಯ ಯಾವುದೇ ಅ ಧಿಕಾರಿ ಇತ್ತ ತಲೆಹಾಕಿಲ್ಲ ಎಂಬುದು ಸ್ಥಳೀಯರ ಗೋಳು.