Advertisement
ಬೆಂಗಳೂರು – ಮಂಗಳೂರು ನಡುವಿನ ಶಿರಾಡಿ ರಾಷ್ಟ್ರೀಯ ಹೆದ್ದಾರಿ, ಹಾಸನ- ಸಕಲೇಶಪುರ, ಹೊಳೆನರಸೀಪುರ- ಬೆಂಗಳೂರು ಕಡೆಗೆ ಸಂಪರ್ಕಿ ಕಲ್ಪಿಸುವ ಬಿಸಿಲೆ ಘಾಟಿ ರಸ್ತೆ, ಸುಬ್ರಹ್ಮಣ್ಯ- ಸುಳ್ಯ- ಸಂಪಾಜೆ ಮೂಲಕ ಮೈಸೂರು ಹಾಗೂ ಕೇರಳಕ್ಕೂ ಸಂಪರ್ಕ ಕಲ್ಪಿಸುವ ರಸ್ತೆಗಳು ಮಾರ್ಗ ಮಧ್ಯೆ ಉಂಟಾದ ಭೂಕುಸಿತದಿಂದ ವಾಹನ ಓಡಾಟವಿಲ್ಲ. ಬೆಂಗಳೂರು-ಮಂಗಳೂರು ನಡುವಿನ ರೈಲು ಯಾನವೂ ಸ್ಥಗಿತಗೊಂಡಿದೆ. ಇದೀಗ ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆ ಹಾಗೂ ಸುಬ್ರಹ್ಮಣ್ಯ- ಧರ್ಮಸ್ಥಳ- ಆಗುಂಬೆ ಚಾರ್ಮಾಡಿ ಘಾಟಿ ರಸ್ತೆ ಓಡಾಟಕ್ಕೆ ಮಾತ್ರ ಮುಕ್ತವಾಗಿದೆ. ಹೀಗಿದ್ದರೂ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಆದ ಮಹಾಮಳೆ ಹಾಗೂ ರಸ್ತೆ ಸಂಪರ್ಕ ಸಮಸ್ಯೆಯಿಂದ ಕ್ಷೇತ್ರಕ್ಕೆ ಪ್ರವಾಸಿಗರು ಬರುತ್ತಿಲ್ಲ.
ಕ್ಷೇತ್ರದಲ್ಲಿ ಜನಸಂದಣಿ ಕಾಣುತ್ತಿಲ್ಲ. ವಾಹನ ದಟ್ಟನೆಯೂ ಇಲ್ಲ. ದೇವರ ದರುಶನ ಹಾಗೂ ಸೇವೆಗಳನ್ನು ಪೂರೈಸಿಕೊಳ್ಳಲು ಸರತಿ ಸಾಲು ಇಲ್ಲ. ದೇಗುಲದ ಒಳಾಂಗಣ, ಹೊರಾಂಗಣ, ಆಶ್ಲೇಷಾ ಬಲಿ, ಶೇಷಸೇವೆ, ನಾಗಪ್ರತಿಷ್ಠೆ, ಮಹಾಪೂಜೆ ಮತ್ತು ಪಂಚಾಮೃತ ಮಹಾಭಿಷೇಕಗಳನ್ನು ನೆರವೇರಿಸಲುವ ಸ್ಥಳಗಳು, ರಥಬೀದಿ, ಆದಿ ಸುಬ್ರಹ್ಮಣ್ಯ ಮತ್ತು ಕುಮಾರಧಾರಾ ಸ್ನಾನಘಟ್ಟ ಹೀಗೆ ಕ್ಷೇತ್ರದ ಎಲ್ಲಿಯೂ ಪ್ರವಾಸಿಗರು ಕಂಡುಬರುತ್ತಿಲ್ಲ. ನಗರದ ವಾಹನ ಪಾರ್ಕಿಂಗ್ ಸ್ಥಳಗಳು ಕೂಡ ಖಾಲಿ ಬಿದ್ದಿವೆ. ದೇಗುಲದ ವಸತಿಗೃಹ, ಛತ್ರ, ಖಾಸಗಿ ವಸತಿಗೃಹ ಬಿಕೋ ಎನ್ನುತ್ತಿವೆ. ಸೇವೆಗಳಲ್ಲಿ ಭಾರೀ ಇಳಿಕೆ
ಪ್ರವಾಸಿಗರ ಕೊರತೆಯಿಂದ ದೇಗುಲದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ, ಮಹಾಪೂಜೆ, ತುಲಾಭಾರ, ಕಾರ್ತಿಕ ಪೂಜೆ, ಶೇಷಸೇವೆ, ಮಹಾಭೀಷೇಕ ಇತ್ಯಾದಿ ಸೇವೆಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಮಂಗಳವಾರ ದೇಗುಲದಲ್ಲಿ 47 ಸರ್ಪಸಂಸ್ಕಾರ, 2 ತುಲಾಭಾರ, 21 ಪಂಚಾಮೃತಾಭಿಷೇಕ, 98 ಆಶ್ಲೇಷಾ ಬಲಿ, 15 ನಾಗಪ್ರತಿಷ್ಠೆ, 11 ಮಹಾಪೂಜೆ, 53 ಕಾರ್ತಿಕೇಯ, 79 ಶೇಷಸೇವೆಗಳು ನಡೆದಿವೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದು ಶೇ. 80ರಷ್ಟು ಕಡಿಮೆ. ವ್ಯಾಪಾರಿಗಳೂ ನಷ್ಟಕ್ಕೆ ಒಳಗಾಗಿದ್ದಾರೆ. ಅತಿವೃಷ್ಟಿ ಕಡಿಮೆಯಾಗಿ ಪ್ರಕೃತಿ ಶಾಂತಗೊಂಡು ನಾಡಿನಾದ್ಯಂತ ಜನರು, ಪಶು, ಪಕ್ಷಿ ಸಂಕುಲಗಳು ಶಾಂತಿಯುತವಾಗಿ, ಸುಖ, ನೆಮ್ಮದಿಯಿಂದ ಜೀವನ ನಡೆಸಲು ಕೃಪೆ ತೋರುವಂತೆ ಪ್ರಾರ್ಥಿಸಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯದಲ್ಲಿ ಮಂಗಳವಾರ ಪ್ರಾತಃಕಾಲ 108 ಸೀಯಾಳಾಭಿಷೇಕ ನಡೆಸಲಾಯಿತು.
Related Articles
ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ದಿನಗಳ ಹಿಂದೆ ನೆರೆ ಬಂದು ಅವಾಂತರ ಸೃಷ್ಟಿಸಿದ್ದ ಮಳೆ ಮಂಗಳವಾರ ಕಡಿಮೆಗೊಂಡಿತ್ತು. ದಿನದಲ್ಲಿ ಕೆಲ ಹೊತ್ತು ಮಾತ್ರ ಮಳೆ ಆಗಿದೆ. ನದಿಗಳಲ್ಲಿ ನೆರೆ ಸಂಪೂರ್ಣ ಇಳಿಕೆ ಕಂಡಿದೆ. ಮಳೆ ವಿಶ್ರಾಂತಿ ಪಡೆದಿದೆ. ಜನಜೀವನ ಹಿಂದಿನ ಸ್ಥಿತಿಗೆ ಮರಳುತ್ತಿದೆ.
Advertisement
ಬಾಲಕೃಷ್ಣ ಭೀಮಗುಳಿ