ಬೆಳಗಾವಿ: ಕರುನಾಡಿನಲ್ಲಿ ಮಳೆಯ ಅಬ್ಬರ ತಗ್ಗಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದಿರುವ ಕಾರಣ ಕೃಷ್ಣಾ ಹಾಗೂ ಉಪನದಿಗಳ ಮಟ್ಟ ಏರುತ್ತಲೇ ಇದೆ. 80ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳ ಪ್ರವಾಹದಿಂದ 44 ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಬಾಗಲಕೋಟೆ ಜಿಲ್ಲೆ ಕುಳಗೇರಿ ಕ್ರಾಸ್ ಬಳಿ ಮಲಪ್ರಭಾ ನದಿ ನೀರಿಗೆ ಸೇತುವೆ ಮುಳುಗಡೆಯಾಗಿ ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕ ಕಡಿತಗೊಂಡಿದೆ.
ಕೃಷ್ಣಾ ನದಿಗೆ 2.92 ಲಕ್ಷ ಕ್ಯುಸೆಕ್ ನೀರು ಬರುತ್ತಿರುವುದರಿಂದ ಅಪಾಯದ ಮಟ್ಟ ಮೀರಿದೆ. ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿವಿಧ ಗ್ರಾಮಗಳ ಎಲ್ಲ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಎನ್‌ಡಿಆರ್‌ಎಫ್ ತಂಗಳನ್ನು ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ.ಘಟಪ್ರಭಾ ಆರ್ಭಟ ಸೋಮವಾರ ಸ್ವಲ್ಪ ಕಡಿಮೆಯಾಗಿದ್ದರೂ ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯುಸೆಕ್ ನೀರು ಬಿಡುತ್ತಿರುವುದರಿಂದ ಗೋಕಾಕ, ಮೂಡಲಗಿ ತಾಲೂಕಿನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಖಾನಾಪುರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿಯುತ್ತಿದ್ದ ಮಲಪ್ರಭಾ ನದಿಯು ಸೋಮವಾರ ಸ್ವಲ್ಪಮಟ್ಟಿಗೆ ಶಾಂತವಾಗಿದೆ. ನದಿ ಮತ್ತು ಕಾಲುವೆಗಳಿಗೆ 5,594 ಕ್ಯುಸೆಕ್ ನೀರು ಬಿಡಲಾಗುತ್ತಿದ್ದು ರಾಮದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
8,698 ಜನ ಕಾಳಜಿ ಕೇಂದ್ರಕ್ಕೆ
2,450 ಕುಟುಂಬಗಳನ್ನು ರಕ್ಷಿಸಲಾಗಿದೆ. ಅಥಣಿ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಮೂಡಲಗಿ ತಾಲೂಕುಗಳಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಗಳಲ್ಲಿ 8,698 ಜನರಿಗೆ ಆಶ್ರಯ ನೀಡ ಲಾಗಿದೆ. 3,833 ಜನರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. 25 ಜಾನುವಾರು ಶಿಬಿರಗಳನ್ನೂ ತೆರೆದಿದ್ದು, 4,861 ಜಾನುವಾರುಗಳು ಅಲ್ಲಿವೆ.