ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ವರುಣನ ಅಬ್ಬರಕ್ಕೆ ರೈತರ ಬೆಳೆ, ಮನೆಗಳು ಸೇರಿದಂತೆ ಹೆದ್ದಾರಿ, ಸೇತುವೆಗಳು ಹಾನಿಗೀಡಾಗಿವೆ. ಜಿಲ್ಲಾಡಳಿತ ಹಾನಿಯ ಕುರಿತಂತೆ ಸರ್ವೇ ನಡೆಸಿ, 11 ಕೋಟಿಯಷ್ಟು ನಷ್ಟವಾಗಿರುವುದನ್ನು ಅಂದಾಜು ಮಾಡಿದೆ. ಜಿಲ್ಲೆಯಲ್ಲಿ ಚಿತ್ತಿ ಮಳೆಯು ಜನರನ್ನು ಚಿಂತೆಗೀಡು ಮಾಡಿದೆ. ಜಿಲ್ಲೆಯಲ್ಲಿ ವಾಡಿಕೆಯಂತೆ 525 ಮಿ.ಮೀ. ಪೈಕಿ 736 ಮಿ.ಮೀ. ಮಳೆಯಾಗಿರುವ ವರದಿಯಾಗಿದೆ. ಇದರಿಂದ ಬೆಳೆಯು ಹಾನಿಯಾಗುತ್ತಿದೆ. ಮಳೆಯಿಂದಾಗಿ 140 ಹೆಕ್ಟೇರ್
ಪ್ರದೇಶದಷ್ಟು ಕೃಷಿ ಬೆಳೆ ಹಾನಿಯಾಗಿದೆ. ಅಂದರೆ 350 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಹತ್ತಿ, ಭತ್ತ ಬೆಳೆಯು
ಹಾನಿಯಾಗಿದ್ದರೆ ತೋಟಗಾರಿಕೆ ಇಲಾಖೆಯಡಿ 830 ಹೆಕ್ಟೇರ್ ಪ್ರದೇಶಲ್ಲಿ ಬಾಳೆ, ಈರುಳ್ಳಿ ಹಾಗೂ ಮೆಣಸಿನಕಾಯಿ ಸೇರಿ
ಇತರೆ ಬೆಳೆಯೂ ಹಾನಿಯಾಗಿದೆ. ಒಟ್ಟು ಎರಡೂ ವಲಯ ಸೇರಿ 2450 ಎಕರೆ ಬೆಳೆ ಹಾನಿಯಾಗಿದೆ. ಅಂದಾಜು 4.50
ಕೋಟಿಯಷ್ಟು ನಷ್ಟವಾಗಿದೆ. ಹಾನಿಯ ಸ್ಥಿತಿ ಕುರಿತು ಜಂಟಿ ಕಾರ್ಯವೂ ನಡೆದಿದೆ.
2-3 ದಿನಗಳಲ್ಲಿ ಕುಕನೂರು ವ್ಯಾಪ್ತಿಯಲ್ಲಿ 90 ಮನೆಗಳು, ಕೊಪ್ಪಳ ವ್ಯಾಪ್ತಿಯಲ್ಲಿ 20 ಮನೆಗಳು ಇತರೆ ತಾಲೂಕುಗಳಲ್ಲಿ
30 ಮನೆಗಳು ಸೇರಿದಂತೆ 140 ಮನೆಗಳು ಭಾಗಶಃ ಹಾನಿಯಾಗಿರುವ ಕುರಿತು ಅಂದಾಜಿಸಲಾಗಿದೆ. ಮನೆಯ ಹಾನಿಯು 1.40 ಕೋಟಿ ನಷ್ಟವೆಂದು ಅಂದಾಜಿಸಿದೆ. ಇನ್ನೂ ಜಿಲ್ಲೆಯಲ್ಲಿ ಈ ವರ್ಷದಲ್ಲಿ 744 ಮನೆಗಳು ಹಾನಿಗೀಡಾಗಿದ್ದು, 23 ಲಕ್ಷ ರೂ. ಪರಿಹಾರವನ್ನೂ ಪಾವತಿ ಮಾಡಿದೆ.
ಇದನ್ನೂ ಓದಿ:ಸಂತೋಷದಿಂದ, ಸಂಪೂರ್ಣ ಒಪ್ಪಿಗೆಯಿಂದ ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದೇನೆ: ರಾಮುಲು
ಇದಲ್ಲದೇ ಕೋಳೂರು ಗ್ರಾಮದ ಸೇತುವೆ ಕುಸಿತಗೊಂಡಿದ್ದು, ಇದೂ ಸಹಿತ 4 ಕೋಟಿ ರೂ. ನಷ್ಟು ಎಂದು ಅಂದಾಜಿಸಲಾಗಿದೆ. ಕುಷ್ಟಗಿ ತಾಲೂಕಿನ ಚಿಕ್ಕ ಹೆಸರೂರು-ಮುದಗಲ್-ಮುಂಡರಗಿ ರಾಜ್ಯ ಹೆದ್ದಾರಿಯ 129 ಕಿ.ಮೀ. ನಿಂದ 150 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದ ತಡೆಗೋಡೆ ಹಾನಿಯಾಗಿದೆ. ಇದು 1.10 ಕೋಟಿ ರೂ. ಎಂದು ಅಂದಾಜಿಸಿದೆ.