Advertisement

ಕೇರಳ ಕಂಗಾಲು: ಇಡುಕ್ಕಿ; 13ರ ವರೆಗೆ ರೆಡ್‌ ಅಲರ್ಟ್‌

06:54 AM Aug 11, 2018 | Team Udayavani |

ತಿರುವನಂತಪುರ: ಎಡೆಬಿಡದೆ ಸುರಿಯುತ್ತಿರುವ ಮಳೆ, ಪ್ರವಾಹ, ಭೂಕುಸಿತಕ್ಕೆ ದೇವರ ನಾಡು ಅಕ್ಷರಶಃ ಕಂಗಾಲಾಗಿದೆ. ಕೇರಳಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಇಡುಕ್ಕಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. 40 ವರ್ಷಗಳಲ್ಲೇ  ಮೊದಲ ಬಾರಿ ಇಡುಕ್ಕಿ ಜಲಾಶಯದ ಚೆರುತ್ತೋನಿ ಅಣೆಕಟ್ಟಿನ ಎಲ್ಲ 5 ಕ್ರಸ್ಟ್‌ಗೇಟ್‌ ತೆರೆಯಲಾಗಿದೆ. ಹಲವು ಪ್ರದೇಶಗಳಲ್ಲಿ ರಸ್ತೆಗಳಿಗೆ ಹಾನಿ ಯಾಗಿರುವ ಕಾರಣ ಪ್ರವಾಸಿಗರಿಗೂ ಎಚ್ಚರಿಕೆ ನೀಡಲಾಗಿದೆ. ಗುರುವಾರದಿಂದ ಈವರೆಗೆ ಮಳೆ, ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 27ಕ್ಕೇರಿದೆ. ಕೇರಳಕ್ಕೆ ಎಲ್ಲ ರೀತಿಯ ನೆರವನ್ನು ನೀಡಲು ನಾವು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಕೇರಳದ ಸಂಸದರಿಗೆ ಶುಕ್ರವಾರ ಲೋಕಸಭೆಯಲ್ಲಿ ಭರವಸೆ ನೀಡಿದ್ದಾರೆ.

Advertisement

ಸೆಕೆಂಡ್‌ಗೆ 5 ಲಕ್ಷ ಲೀ. ನೀರು ಬಿಡುಗಡೆ
ಜಲಾಶಯದ ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ಚೆರುತ್ತೋನಿ ಅಣೆಕಟ್ಟಿನಿಂದ ಸೆಕೆಂಡ್‌ಗೆ 5 ಲಕ್ಷ ಲೀಟರ್‌ ನೀರನ್ನು ಹೊರಬಿಡಲಾಗುತ್ತಿದೆ. ರಾಜ್ಯಾದ್ಯಂತ ಒಟ್ಟು 24 ಅಣೆಕಟ್ಟುಗಳ ಗೇಟ್‌ ತೆರೆದು ನೀರು ಬಿಡುಗಡೆ ಮಾಡಲಾಗಿದೆ. ಸೇನೆಯಿಂದ ರಕ್ಷಣಾ ಕಾರ್ಯ ರಕ್ಷಣಾ ಕಾರ್ಯದಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ರಕ್ಷಕ ಪಡೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ತೊಡಗಿಸಿಕೊಂಡಿವೆ. ಕೇರಳದ ಉತ್ತರದ ಜಿಲ್ಲೆಗಳಲ್ಲಿ ಸೇನೆಯು ಸಣ್ಣ ಸಣ್ಣ ಸೇತುವೆಗಳನ್ನು ನಿರ್ಮಿಸಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ. ತಗ್ಗುಪ್ರದೇಶಗಳ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಟ್ಟು 241 ಪರಿಹಾರ ಶಿಬಿರಗಳನ್ನು ನಿರ್ಮಿಸಲಾಗಿದೆ.

ಪ್ರವಾಸಿಗರ ರಕ್ಷಣೆ
ಭಾರೀ ಮಳೆ, ಭೂಕುಸಿತದಿಂದಾಗಿ 24 ಮಂದಿ ವಿದೇಶೀಯರ ಸಹಿತ 50ಕ್ಕೂ ಹೆಚ್ಚು ಪ್ರವಾಸಿ ಗರು ಇಡುಕ್ಕಿ ಜಿಲ್ಲೆಯ ಮನ್ನಾರ್‌ನಲ್ಲಿ ಸಿಲುಕಿ ಕೊಂಡಿದ್ದರು. ಅವರನ್ನು ಶನಿವಾರ ಸಂಜೆ ವೇಳೆ ಸೇನೆಯ ನೆರವಿನೊಂದಿಗೆ ರಕ್ಷಿಸಲಾಗಿದೆ. ಇವರಲ್ಲಿ ರಷ್ಯಾ, ಸೌದಿ ಅರೇಬಿಯಾ ಹಾಗೂ ಒಮಾನ್‌ನ ನಾಗರಿಕರೂ ಸೇರಿದ್ದರು. ಜಾಗತಿಕ, ಸ್ಥಳೀಯ ಅಂಶಗಳೇ ಕಾರಣ ಕೇರಳದಲ್ಲಿ ಇಷ್ಟೊಂದು ಪ್ರಮಾಣದ ಮಳೆಗೆ ಜಾಗತಿಕ ವಿದ್ಯಮಾನಗಳು ಮಾತ್ರವಲ್ಲದೆ, ಅರಣ್ಯ ನಾಶ, ಪರ್ವತ ಪ್ರದೇಶಗಳ ಅತಿಕ್ರಮಣದಂಥ ಸ್ಥಳೀಯ ಅಂಶಗಳೇ ಕಾರಣ ಎಂದು ಖ್ಯಾತ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಜಿ. ಮಾಧವನ್‌ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ. ಅರಣ್ಯನಾಶದಿಂದಾಗಿ ಕೇರಳದಲ್ಲಿ ಗಣನೀಯ ವಾಗಿ ಹವಾಮಾನ ಬದಲಾವಣೆ ಆಗಿದೆ. ಸಮುದ್ರಮಟ್ಟದಿಂದ ಕೆಳಗಿರುವ ಕುಟ್ಟನಾಡ್‌ ಪ್ರದೇಶವನ್ನು ಸರಿಯಾಗಿ ನಿರ್ವಹಣೆ ಮಾಡ ಲಾಗುತ್ತಿಲ್ಲ ಎಂದಿದ್ದಾರೆ ನಾಯರ್‌.

ರಾಜ್ಯದಲ್ಲೂ ನೆರೆ ಭೀತಿ
ಬೆಂಗಳೂರು: ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಸಹಿತ ಹಳೆ ಮೈಸೂರು ಭಾಗದಲ್ಲಿ ಮಳೆಯಾಗುತ್ತಿದೆ. ಕೆಆರ್‌ಎಸ್‌ಜಲಾಶಯದ 27 ಗೇಟುಗಳಿಂದ 65 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದ್ದು, ನಿಮಿಷಾಂಬ, ಸಾಯಿ ಮಂದಿರ, ಸ್ನಾನಘಟ್ಟ ಸಹಿತ ಕಾವೇರಿ ಸಂಗಮದ ದೇವಾಲಯಗಳ ಬಳಿ ಬ್ಯಾರಿಕೇಡ್‌ ಹಾಕಿ ನದಿ ತೀರಕ್ಕೆ ಹೋಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.

ದ.ಕ.: ಇಂದು ಶಾಲೆ, ಕಾಲೇಜುಗಳಿಗೆ ರಜೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಆ. 11ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪ. ಪೂ. ಕಾಲೇಜುಗಳಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ರಜೆ ಘೋಷಿಸಿದ್ದಾರೆ. ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next