Advertisement

ದೇಶದ ಹಲವೆಡೆ ವರ್ಷಾಘಾತ; ಕಾರ್ಯಾಚರಣೆಗೆ ಐಎಎಫ್ ಸಿದ್ಧ 

08:54 AM Jul 22, 2020 | mahesh |

ಹೊಸದಿಲ್ಲಿ: ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು, ಜನ ಭಯಭೀತರಾಗಿದ್ದಾರೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಲ, ಉತ್ತರ ಬಿಹಾರ ಸೇರಿದಂತೆ ಹಲವು ರಾಜ್ಯ ಗಳಲ್ಲಿ ಬುಧವಾರವೂ ಮಳೆ ಮುಂದುವರಿಯುವುದಾಗಿ ಹೇಳಿರುವ ಹವಾಮಾನ ಇಲಾಖೆ, ರೆಡ್‌ ಅಲರ್ಟ್‌ ಘೋಷಿಸಿದೆ. ಈಗಾಗಲೇ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯ ಗಳಿಗೆ ಇದು ಇನ್ನಷ್ಟು ಆತಂಕ ಮೂಡಿಸಿದೆ. ಇದೇ ವೇಳೆ, ಅಸ್ಸಾಂನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ವಾಯುಪಡೆ ಸಜ್ಜಾಗಿದೆ.

Advertisement

ಪೂರ್ವ ಏರ್‌ ಕಮಾಂಡ್‌ ಪ್ರವಾಹ ಸ್ಥಿತಿಯನ್ನು ಗಮನಿಸುತ್ತಿದ್ದು, ಎಂಐ 17, ಸುಧಾರಿತ ಲಘು ಹೆಲಿಕಾಪ್ಟರ್‌ ಸೇರಿದಂತೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದವು ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ವಾಯುಪಡೆ ಮಂಗಳವಾರ ತಿಳಿಸಿದೆ. ಈಗಾಗಲೇ ಅಸ್ಸಾಂನ 24 ಜಿಲ್ಲೆಗಳಲ್ಲಿ ಪ್ರವಾಹವು ತಲೆದೋರಿದ್ದು, 24 ಲಕ್ಷ ಮಂದಿ ಅತಂತ್ರರಾಗಿದ್ದಾರೆ. 2,254 ಗ್ರಾಮಗಳು ಜಲಾವೃತಗೊಂಡಿವೆ. ಈ ನಡುವೆ, ಅಸ್ಸಾಂನ ಪರಿಸ್ಥಿತಿಯನ್ನು ಗಮನಿಸಿರುವ ವಿಶ್ವಸಂಸ್ಥೆ, ಅಗತ್ಯವಿದ್ದರೆ ಭಾರತ ಸರಕಾರಕ್ಕೆ ನೆರವು ನೀಡುವುದಾಗಿ ಘೋಷಿಸಿದೆ. ಮೇಘಾಲಯ ದಲ್ಲೂ ಪ್ರವಾಹ ಹೆಚ್ಚಾಗುತ್ತಿದ್ದು, ಸಿಎಂ ಕೊನ್ರಾಡ್‌ ಸಂಗ್ಮಾ ಅವರೊಂದಿಗೆ ಮಂಗಳ ವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಾವಿನ ಸಂಖ್ಯೆ 5ಕ್ಕೇರಿಕೆ: ಉತ್ತರಾಖಂಡದ ಪಿತ್ತೋರ್‌ಗಢ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಮೇಘಸ್ಫೋಟದಲ್ಲಿ ಮೃತಪಟ್ಟ ವರ ಸಂಖ್ಯೆ ಮಂಗಳವಾರ 5ಕ್ಕೇರಿದೆ. ಮನೆ ಗಳ ಅವಶೇಷಗಳಡಿ ಸಿಲುಕಿದ್ದ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಇನ್ನೂ 9 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಧಾರಾಕಾರ ಮಳೆ: ರಾಷ್ಟ್ರ ರಾಜಧಾನಿ ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆಯಾಗಿದ್ದು, ತಗ್ಗುಪ್ರದೇಶಗಳೆಲ್ಲ ಜಲಾವೃತವಾಗಿವೆ. ರಸ್ತೆಗಳು ಮುಳುಗಡೆಯಾದ ಕಾರಣ ಸಂಚಾರಕ್ಕೆ ಅಡ್ಡಿಯಾಗಿ, ವಾಹನ ಸವಾರರು ಪರದಾಡಿದ್ದಾರೆ. ಬುಧವಾರವೂ ಇಲ್ಲಿ ಭಾರೀ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಗ್ರಾಮ ಜಲಾವೃತ: ಕೇರಳದ ಎರ್ನಾಕುಳಂ ಜಿಲ್ಲೆಯ ಕುಟ್ಟಂಪುಳ ಗ್ರಾಮವು ಮಳೆಯಿಂದಾಗಿ ಜಲಾವೃತಗೊಂಡಿದೆ. ಸಣ್ಣಪುಟ್ಟ ತೊರೆ, ಕಾಲುವೆಗಳು ತುಂಬಿ ಹರಿದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿವೆ. ಇಲ್ಲಿ ಸಿಲುಕಿದ್ದ ಅನೇಕರನ್ನು ಅನಂತರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.

Advertisement

ಗೋಡೆ ಕುಸಿತ: ಉತ್ತರಾಖಂಡದ ಹರಿದ್ವಾರ ದಲ್ಲಿ ಭಾರೀ ಸಿಡಿಲು ಬಡಿದ ಪರಿಣಾಮ, ಹರಿ ಕಿ ಪೌರಿಯಲ್ಲಿ ಗೋಡೆ ಕುಸಿದು ಬಿದ್ದಿದೆ. ಬ್ರಹ್ಮಕುಂಡ್‌ನ‌ಲ್ಲಿ ಸಿಡಿಲು ಬಡಿದಾಗ ಅಲ್ಲೇ ಇದ್ದ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿ ಕೊಂಡಿತು ಹಾಗೂ ಗೋಡೆ ಕುಸಿದುಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದ ಪೂಂಛ… ಜಿಲ್ಲೆಯಲ್ಲೂ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳವಾರ ನಡೆದಿದೆ.

ಅಸ್ಸಾಂನಲ್ಲಿ 24 ಲಕ್ಷ ಮಂದಿಗೆ ಪ್ರವಾಹದಿಂದ ತೊಂದರೆ
ಮೇಘಾಲಯದಲ್ಲೂ ಮಳೆ; ಕೇಂದ್ರದಿಂದ ನೆರವಿನ ಭರವಸೆ
ಉತ್ತರಾಖಂಡದಲ್ಲಿ ಮಳೆಗೆ ಜೀವ ಕಳೆದುಕೊಂಡವರ ಸಂಖ್ಯೆ ಐದಕ್ಕೆ ಏರಿಕೆ; 9 ಮಂದಿ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next