Advertisement

Vijayapura ಮೃಗಶಿರ ವರುಣಾರ್ಭಟ: ಒಂದೇ ದಿನದಲ್ಲಿ 32.7 ಮಿ.ಮೀ. ಮಳೆ; ಕುಸಿದ ಮನೆಗಳು

03:21 PM Jun 07, 2024 | keerthan |

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಒಂದೇ ದಿನದಲ್ಲಿ 32.7 ಮಿ.ಮೀ. ಮಳೆ ಸುರಿದಿದೆ. ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿವೆ. ನಗರದ ಪೊಲೀಸ್ ವಸತಿಗೃಹಗಳು ಸೇರಿದಂತೆ ವಿವಿಧ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗ್ರಾಮೀಣ ಭಾಗದಲ್ಲಿ ಮನೆಗಳು ನೆಲಕ್ಕುರುಳಿವೆ.

Advertisement

ವಿಜಯಪುರ ಮೃಗಶಿರ ಮಳೆ ಆರಂಭ ಹಂತದಲ್ಲೇ ಅಬ್ಬರಿಸತೊಡಗಿದ್ದು, ಕೊಲ್ಹಾರ, ತಿಕೋಟಾ, ನಿಡಗುಂದಿ, ಮುದ್ದೇಬಿಹಾಳ, ಬಬಲೇಶ್ವರ, ಬಸವನಬಾಗೇವಾಡಿ ಸೇರಿದಂತೆ ವಿವಿಧ ಭಾಗದಲ್ಲಿ 40 ರಿಂದ 75 ಮಿ.ಮೀ. ಮೀರಿ ಮಳೆ ಸುರಿದಿದೆ.

ಕೊಲ್ಹಾರ ತಾಲೂಕಿನಲ್ಲಿ 76.2 ಮಿ.ಮೀ. ಮಳೆಯಾಗಿದ್ದು, ಮುಳವಾಡ, ರೋಣಿಹಾಳ, ಬಳೂತಿ, ಬಸವನಬಾಗೇವಾಡಿ ತಾಲೂಕಿನ ಯರನಾಳ, ಬೊಮ್ಮನಹಳ್ಳಿ, ನಿಡಗುಂದಿ ತಾಲೂಕಿನ ಚಿಮ್ಮಲಗಿ, ವಂದಾಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಣ್ಣಿನ ಮೇಲ್ಛಾವಣಿಯ ಮನೆಗಳು ಧರೆಗುರುಳಿವೆ.

ಚನ್ನಮಲ್ಲಪ್ಪ ಆಣಿಗೇರ, ಶಿವಪ್ಪ ಬಡಿಗೇರ, ಶಿವಪ್ಪ ಅಗಸರ, ಜಯಶ್ರೀ ತೆಗ್ಗಿ, ಸಿದ್ದಪ್ಪ ಮೇಟಿ, ಶ್ರೀಶೈಲ ಜೈನಾಪುರ, ಯರನಾಳದ ನಿಂಗವ್ವ ಕಾಳಗಿ, ಬೊಮ್ಮನಹಳ್ಳಿಯ ಮಲ್ಲಮ್ಮ ಅಗಸರ, ರಾಜಮಾ ಉಣಕಲ್ ಸೇರಿದಂತೆ ಹಲವು ಜನರ ಮಣ್ಣಿನ ಮೇಲ್ಛಾವಣಿ ಹೊಂದಿರುವ ಮಡಿಗೆಯ ಮನೆಗಳು ಕುಸಿದು ಬಿದ್ದಿವೆ.

ನಗರದ ಸೋಲಾಪುರ ರಸ್ತೆಯಲ್ಲಿರುವ ಪೊಲೀಸ್ ವಸತಿ ಗೃಹ ಸಮುಚ್ಛಯದ ಪ್ರದೇಶಗಳಿಗೆ ರಾತ್ರಿ ಏಕಾಏಕಿ ಮಳೆಯ ನೀರು ನುಗ್ಗಿದ್ದರಿಂದ ಪೊಲೀಸ್ ಕುಟುಂಬದವರು ಕಂಗಾಲಾಗಿದ್ದರು. ಕೂಡಲೇ ಜೆಸಿಬಿ ಬಳಸಿ ಮಳೆಯ ನೀರು ಮನೆಗೆ ನುಗ್ಗದೆ ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರೂ, ಜನರ ಪರದಾಟ ತಪ್ಪಲಿಲ್ಲ.

Advertisement

ನಗರದ ಇಬ್ರಾಹಿಂಪುರ ತಗ್ಗು ಪ್ರದೇಶಕ್ಕೆ ಮಳೆಯ ಭಾರಿ ಪ್ರಮಾಣದಲ್ಲಿ ನೀರು ಗಲ್ಲಿಗಳಲ್ಲೆಲ್ಲ ಹರಿದು, ಮನೆಗಳಿಗೂ ನುಗ್ಗಿದೆ. ಮತ್ತೊಂದೆಡೆ ಮನಗೂಳಿ ಅಗಸಿ ಪ್ರದೇಶದಲ್ಲಿ ಮಳೆ ನೀರಿನ ಅಬ್ಬರಕ್ಕೆ ದ್ವಿಚಕ್ರ ವಾಹನ ಸವಾರರ ಸಮೇತ ಕೊಚ್ಚಿಕೊಂಡು ಹೋಗಿದ್ದರೂ ಸುದೈವಶಾತ್ ಯಾವುದೇ ಜೀವಹಾನಿಯಂಥ ಅಪಾಯ ಸಂಭವಿಸಿಲ್ಲ.

ವಿಜಯಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಭಾರಿ ಮಳೆ ಸುರಿದ ಕಾರಣ ಕೊಲ್ಹಾರ ತಾಲೂಕಿನಲ್ಲಿ 76.2 ಮಿ.ಮೀ., ತಿಕೋಟ ತಾಲೂಕಿನಲ್ಲಿ 69.9 ಮಿ.ಮೀ., ನಿಡಗುಂದಿ ತಾಲೂಕಿನಲ್ಲಿ 64.9 ಮಿ.ಮೀ., ಬಬಲೇಶ್ವರ ತಾಲೂಕಿನಲ್ಲ 49.8 ಮಿ.ಮೀ., ಮುದ್ದೇಬಿಹಾಳ ತಾಲೂಕಿನಲ್ಲಿ 41 ಮಿ.ಮೀ, ಬಸವನಬಾಗೇವಾಡಿ ತಾಲೂಕಿನಲ್ಲಿ 37.6 ಮಿ.ಮೀ., ತಾಳಿಕೋಟೆ ತಾಲೂಕಿನಲ್ಲಿ 34.1 ಮಿ.ಮೀ., ವಿಜಯಪುರ ತಾಲೂಕಿನಲ್ಲಿ 26.9 ಮಿ.ಮೀ., ದೇವರಹಿಪ್ಪರಗಿ ತಾಲೂಕಿನಲ್ಲಿ 20.3 ಮಿ.ಮೀ., ಸಿಂದಗಿ ತಾಲೂಕಿನಲ್ಲಿ 18.7 ಮಿ.ಮೀ., ಚಡಚಣ ತಾಲೂಕಿನಲ್ಲಿ 10 ಮಿ.ಮೀ., ಇಂಡಿ ತಾಲೂಕಿನಲ್ಲಿ 9.5 ಮಿ.ಮೀ. ಹಾಗೂ ಆಲಮೇಲ ತಾಲೂಕಿನಲ್ಲಿ 7.6 ಮಿ.ಮೀ. ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next