ಬೆಳಗಾವಿ: ನಗರದಲ್ಲಿ ಎರಡು ದಿನದಿಂದ ತುಂತುರು ಮಳೆ ಸುರಿಯುತ್ತಿದ್ದು, ಕೆಲವೊಂದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಶನಿವಾರ ಹಾಗೂ ರವಿವಾರ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ರವಿವಾರ ಮಧ್ಯಾಹ್ನ ಸುಮಾರು ಒಂದು ತಾಸು ಮಳೆ ಸುರಿಯಿತು. ನಗರದ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ತುಂತುರು ಮಳೆ ಆಗಿದೆ.
ಎರಡು ದಿನ ಮಳೆ ಸುರಿದಿದ್ದರಿಂದ ರೈತರು ಸಂತಸಗೊಂಡಿದ್ದು, ಇನ್ನು ಮುಂದೆ ಬಿತ್ತನೆ ಕಾರ್ಯದಲ್ಲಿ ತೊಡಗಲಿದ್ದಾರೆ. ಈಗಾಗಲೇ ಬಹುತೇಕ ಕಡೆಗೆ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ.
ನಗರದ ತಗ್ಗು ಪ್ರದೇಶಗಳಲ್ಲಿ, ಬಡಾವಣೆ ಹಾಗೂ ಗಲ್ಲಿಗಳಲ್ಲಿ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಗಾಂಧಿ ನಗರದ ಸೇತುವೆ ಕೆಳಗೆ ನೀರು ನಿಂತಿದ್ದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಸುಮಾರು ಒಂದೂವರೆ ಅಡಿವರೆಗೂ ಹೆಚ್ಚು ನೀರು ಸೇತುವೆ ಕೆಳಗೆ ನಿಂತಿತ್ತು.
ನಗರ ಬಸ್ ನಿಲ್ದಾಣ ಕಾಮಗಾರಿ ನಡೆದಿದ್ದರಿಂದ ಬೇರೆ-ಬೇರೆ ಕಡೆಗೆ ಬಸ್‌ಗಳು ನಿಲ್ಲುತ್ತಿವೆ. ಈ ಬಸ್ ನಿಲ್ದಾಣ ಸುತ್ತಲೂ ಕೆಂಪು ಮಣ್ಣು ಇದ್ದಿದ್ದರಿಂದ ಮಳೆಯಿಂದಾಗಿ ಸಂಪೂರ್ಣ ರಾಡಿಯಾಗಿತ್ತು. ಪ್ರಮಾಣಿಕರು ಬಸ್ ನಿಲ್ದಾಣದೊಳಗೆ ಹೋಗಲು ಪ್ರಯಾಸ ಪಡುವಂತಾಯಿತು.