Advertisement
ಕೃಷ್ಣಾ, ವೇದಗಂಗಾ, ದೂಧಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ವರದಾ, ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ತುಂಗಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ಜಲಪ್ರಳಯಕ್ಕೆ ಅಕ್ಷರಶಃ ತತ್ತರಿಸಿ ಹೋಗಿವೆ. ಬದುಕು ದುರ್ಭರವಾಗಿದ್ದು, ಜನರ ಪರದಾಟ ಮನಕಲಕುತ್ತಿದೆ.
Related Articles
Advertisement
ಸಂತ್ರಸ್ತರು ಅಪಾರ ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದುವರೆಗೆ 40,180 ಜನರನ್ನು ರಕ್ಷಿಸಲಾಗಿದೆ.
161 ಪರಿಹಾರ ಕೇಂದ್ರ ಆರಂಭಿಸಲಾಗಿದೆ. 1,36,529 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಗೋಕಾಕ ನಗರಕ್ಕೆ ನೀರು ನುಗ್ಗಿಜಲಾವೃತವಾಗಿದೆ. ಖಾನಾಪುರ ಬಾಹ್ಯ ಸಂಪರ್ಕಕಡಿತಗೊಂಡಿದೆ. ಮಹಾರಾಷ್ಟ್ರ, ಗೋವಾ ಸಂಪರ್ಕ ಕಡಿತ ಮುಂದುವರೆದಿದೆ. ಬಾಗಲಕೋಟೆ ತತ್ತರ: ಘಟಪ್ರಭಾ ನದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ನದಿ ಪಾತ್ರದ ಸುಮಾರು ಮೂರು ಕಿ.ಮೀ.
ಸುತ್ತಳತೆಯಲ್ಲಿ ನದಿ ವಿಶಾಲವಾಗಿ ಹರಿಯುತ್ತಿದೆ. ಈವರೆಗೆ 18 ಸಾವಿರ ಜನರ ರಕ್ಷಣೆ ಮಾಡಲಾಗಿದೆ. ಮುಧೋಳ ತಾಲೂಕಿನ ಸೋರಗಾವ, ಮಳಲಿ ಹಾಗೂ ಜಮಖಂಡಿ
ತಾಲೂಕಿನ ಕವಟಗಿ ಬುಧವಾರ ಜಲಾವೃತಗೊಂಡಿವೆ. ಈವರೆಗೆ ಜಿಲ್ಲೆಯಲ್ಲಿ ಮೂರು ನದಿಗಳ ಪ್ರವಾಹದಿಂದ ಆರು ತಾಲೂಕಿನ 53 ಗ್ರಾಮಗಳು ಬಾಧಿತಗೊಂಡಿವೆ. 12 ಸೇತುವೆಗಳು ಜಲಾವೃತವಾಗಿವೆ. ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ, ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಬಂದ್ ಆಗಿವೆ. ಕೃಷ್ಣಾ ನದಿ ಅಬ್ಬರ ರಾಯಚೂರು, ಯಾದಗಿರಿಯಲ್ಲೂ ಮುಂದುವರಿದಿದೆ. ದೇವದುರ್ಗ ತಾಲೂಕಿನ ಕೊಪ್ಪರ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ರಾಯಚೂರು ತಾಲೂಕಿನ ಕಾಡೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಗೂಗಲ್ ಅಲ್ಲಮಪ್ರಭುಸ್ವಾಮಿ ದೇವಸ್ಥಾನಕ್ಕೂ ನೀರು ನುಗ್ಗಿದೆ. ವಿಜಯಪುರದಲ್ಲೂ ಆಲಮಟ್ಟಿ ಭರ್ತಿಯಾಗಿದ್ದು, ತೀರ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯಕ್ಕೆ ನಾಲ್ಕೇ ದಿನದಲ್ಲಿ 14 ಟಿಎಂಸಿ ಅಡಿ ನೀರು ಹರಿದು ಬಂದಿದ್ದು, ಡ್ಯಾಂನ ಒಳಹರಿವಿನಲ್ಲಿ 1,02,444 ಕ್ಯೂಸೆಕ್‌ನಷ್ಟು ಹೆಚ್ಚಾಗಿದೆ. 12 ಜನ ಸಾವು: ಸಾಗರ ತಾಲೂಕಿನ ತುಂಬೆ ಸಮೀಪದ ಮೂರ್ಕಟ್ಟೆಯ ತಿಮ್ಮಾ ನಾಯ್ಕ (63), ತೀರ್ಥಹಳ್ಳಿ ತಾಲೂಕಿನ ಕರಡಿಗ ಗ್ರಾಮದ ಮಹಿಳೆ ರೇವಮ್ಮ (65),
ಭದ್ರಾವತಿ ತಾಲೂಕಿನ ಎರೆಹಳ್ಳಿಯ ಷಣ್ಮುಖ (35) ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಧಾರವಾಡ ತಾಲೂಕು ಮುರಕಟ್ಟಿ ಗ್ರಾಮದ ಬಳಿ ಬೇಡ್ತಿ ಹಳ್ಳದಲ್ಲಿ ಸಿಲುಕಿ ವಾಹನ
ಚಾಲಕ ಮಹ್ಮದ್ ಜಮೀಲ್ ಮುಕು¤ಮಸಾಬ್ ನದಾಫ್ (36) ಸಾವನಪ್ಪಿದ್ದಾನೆ. ಹುಬ್ಬಳ್ಳಿ ತಾಲೂಕು ಗಾಮನಗಟ್ಟಿಯಲ್ಲಿ ಮನೆ ಕುಸಿದು ಚನ್ನಮ್ಮ ವಾಲಿಕಾರ (45) ಮೃತಪಟ್ಟಿದ್ದಾರೆ. ಚಿಕ್ಕೋಡಿಯಲ್ಲಿ ಹಳ್ಳ ದಾಟುವಾಗ ಶಿಲ್ಪಾ ಸಿದ್ದಪ್ಪ ಮನಗೂಳಿ (11) ಕೊಚ್ಚಿ ಹೋಗಿದ್ದಾಳೆ. ಹುಕ್ಕೇರಿ ತಾಲೂಕಿನ ಮದಹಳ್ಳಿ ಗ್ರಾಮದ ಬಾಳಪ್ಪ ಕಬ್ಬೂರಿ (75) ಮನೆ ಗೋಡೆ ಕುಸಿದು ಮೃತಪಟ್ಟಿದ್ದಾರೆ. ಗೋಕಾಕದಲ್ಲಿ ಅಸ್ವಸ್ತಗೊಂಡಿದ್ದ ಗಂಗವ್ವ ಬೆನಚಿನಮರಡಿ (55) ಅವರನ್ನು ಧಾರಾಕಾರ ಮಳೆಯಿಂದ ಆಸ್ಪತ್ರೆಗೆ ಸಾಗಸಲು ಆಗದೆ ಅಸುನೀಗಿದ್ದಾರೆ. ಯಾದಗಿರಿಯಲ್ಲಿ ಭೀಮಾ ನದಿಗೆ ಸಾಬರಡ್ಡಿ (36) ಕೊಚ್ಚಿ ಹೋಗಿದ್ದಾನೆ.ಕರಾವಳಿಯ ಉಡುಪಿಯಲ್ಲಿ ಮನೆ ಕುಸಿದು ಮಹಿಳೆ ಸಾವು,ದಕ್ಷಿಣ ಕನ್ನಡದಲ್ಲಿ ಮಗುವೊಂದು ಚರಂಡಿಗೆ ಬಿದ್ದು ಸಾವನ್ನಪ್ಪಿದೆ. 5 ಲಕ್ಷ ಪರಿಹಾರ
ಮಳೆ ಅನಾಹುತಕ್ಕೆ ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಮನೆ ಕಳೆದುಕೊಂಡವರಿಗೆ ಸರಕಾರದಿಂದಲೇ ಸೂರು ನಿರ್ಮಿಸಿಕೊಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಪೀಡಿತ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದರು.
ಸಿಎಂ ನಿಧಿಗೆ ನೆರವಾಗಿ
ಪ್ರವಾಹಕ್ಕೀಡಾಗಿರುವ 15 ಜಿಲ್ಲೆಗಳ ಜನರಿಗೆ ನೆರವಾಗಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಖಾತೆಯ ಹೆಸರು: ಚೀಫ್ ಮಿನಿಸ್ಟರ್ ರಿಲೀಫ್ ಫಂಡ್ ನ್ಯಾಚುರಲ್ ಕೆಲಾಮಿಟಿ. ಬ್ಯಾಂಕ್: ಎಸ್‌ಬಿಐ, ಶಾಖೆ: ವಿಧಾನಸೌಧ ಶಾಖೆ ಖಾತೆ ಸಂಖ್ಯೆ: 37887098605, ಐಎಫ್ಎಸ್‌ಸಿ ಕೋಡ್: SBIN0040277, ಎಂಐಸಿಆರ್ ಸಂಖ್ಯೆ: 560002419. ಚೆಕ್ ಕಳುಹಿಸಬೇಕಾದ ವಿಳಾಸ: ನಂ. 235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು- 560001