Advertisement
ಮಹಾರಾಷ್ಟ್ರದ ಕೊಯ್ನಾ ಜಲಾಶಯ ವ್ಯಾಪ್ತಿ, ಅಂಬೋಲಿ, ಅಜರಾ ಪ್ರದೇಶ, ಮಲಪ್ರಭಾ ನದಿಯ ಉಗಮ ಸ್ಥಾನ ಖಾನಾಪುರದ ಕಣಕುಂಬಿ ಅರಣ್ಯದಲ್ಲಿ ಧಾರಾಕಾರ ಮಳೆಯಿಂದ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ 2.31 ಲಕ್ಷ ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ಕೊಯ್ನಾ ಜಲಾಶಯದಲ್ಲಿ 94 ಟಿಎಂಸಿ ನೀರು ಸಂಗ್ರಹವಾಗಿದ್ದು, ಭರ್ತಿಗೆ ಇನ್ನು 10 ಟಿಎಂಸಿ ಅಗತ್ಯವಿದೆ.
ಸಮೀಕ್ಷೆ
ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಜು.5ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಅಥಣಿ, ರಾಯಚೂರು, ಯಾದಗಿರಿ ಮೂಲಕ ಬಾಗಲಕೋಟೆಗೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ವಿಜಯಪುರ ಜಿಲ್ಲೆಗೆ ತೆರಳಿ ಮಧ್ಯಾಹ್ನ 12ಕ್ಕೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನೆ ಸಭೆ ನಡೆಸಲಿದ್ದಾರೆ.
ಸೇನಾ ನಿಯೋಜನೆ
ಕೃಷ್ಣಾ ನದಿಯ ಪ್ರವಾಹ ಏರಿಕೆಯಾಗುತ್ತಿರುವ ಕಾರಣ ಪರಿಹಾರ ಕಾರ್ಯಗಳಿಗಾಗಿ ಮರಾಠಾ ಲಘು ಪದಾತಿ ದಳ ಕೇಂದ್ರದ ಎರಡು ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಈ ಸೇನಾ ಸಿಬ್ಬಂದಿ ಅಥಣಿ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.