Advertisement

Udupi ಮಳೆ ಬಿರುಸು: ದೊಡ್ಡಣಗುಡ್ಡೆ ಶಾಲೆಯ ಗೋಡೆ ಕುಸಿತ

12:49 AM Jul 16, 2024 | Team Udayavani |

ಉಡುಪಿ: ಜಿಲ್ಲಾದ್ಯಂತ ರವಿವಾರ ತಡರಾತ್ರಿ ಮತ್ತು ಸೋಮವಾರ ಮಳೆ ಬಿರುಸುಗೊಂಡಿದ್ದು, ಹಲವೆಡೆ ಗಾಳಿ ಮಳೆಯಿಂದ ಮನೆಗಳಿಗೆ ಹಾನಿ ಸಂಭವಿಸಿದೆ. ದೊಡ್ಡಣಗುಡ್ಡೆಯಲ್ಲಿ ಶಾಲೆಯ ಗೋಡೆ ಕುಸಿದ ಘಟನೆ ವರದಿಯಾಗಿದೆ.

Advertisement

ಮುಂದಿನ ಮೂರ್ನಾಲ್ಕು ದಿನ ಹೆಚ್ಚು ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ಅಂಗನವಾ ಡಿಯಿಂದ ಪಿಯುಸಿ ವರೆಗಿನ ಮಕ್ಕಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

ವ್ಯಾಪಕ ಮಳೆಯಿಂದಾಗಿ ಕುಂದಾಪುರ, ಬೈಂದೂರು ತಾಲೂಕಿನಲ್ಲಿ 17ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.

ಕಂದಾವರ, ಆಲೂರು, ಕೋಣಿ, ಕಾಲೊಡು, ಉಪ್ಪುಂದ, ಬಿಜೂರು ರಟ್ಟಾಡಿ ಭಾಗದಲ್ಲಿ ಗಾಳಿ ಮಳೆಗೆ ಮನೆಗಳಿಗೆ ಹಾನಿಯಾಗಿದೆ.

ಕುಂದಾಪುರದ ಸಿದ್ದಾಪುರದ ಮಮತಾ ಶೆಟ್ಟಿ ಅವರ ತೋಟಗಾರಿಕೆ ಬೆಳೆಗೆ ಹಾನಿಯಾಗಿದ್ದು, ಆಲೂರಿನ ಸುಶೀಲಾ, ಕೋಣಿ ಗ್ರಾಮದ ಪಾರ್ವತಿ ಶೆಟ್ಟಿ ಅವರ ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ.

Advertisement

ಕಾರ್ಕಳ 89.1, ಕುಂದಾಪುರ 60.6, ಉಡುಪಿ 82.4, ಬೈಂದೂರು 65.5, ಬ್ರಹ್ಮಾವರ 74.3, ಕಾಪು 78.7, ಹೆಬ್ರಿ 83.0 ಮಿ. ಮೀ. ಮಳೆಯಾಗಿದ್ದು, ಸೋಮವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳಲ್ಲಿ 74.6 ಮಿ. ಮೀ. ಸರಾಸರಿ ಮಳೆಯಾಗಿದೆ.

155 ವಿದ್ಯುತ್‌ ಕಂಬಗಳಿಗೆ ಹಾನಿ
ಎರಡು ದಿನಗಳಿಂದ ಗಾಳಿ ಮಳೆಗೆ ಜಿಲ್ಲೆಯಲ್ಲಿ 155 ವಿದ್ಯುತ್‌ ಕಂಬಗಳು ಬಿದ್ದಿದ್ದು, ಹಲವೆಡೆ ವಿದ್ಯುತ್‌ ಪೂರೈಕೆ ಗಂಟೆಗಟ್ಟಲೆ ಸ್ಥಗಿತಗೊಂಡಿದೆ. ಉಡುಪಿ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ರಾತ್ರಿ ಹೋಗಿದ್ದ ವಿದ್ಯುತ್‌ ಸಂಪರ್ಕ ಮುಂಜಾನೆ ಪೂರೈಕೆಯಾಗಿದೆ. 2.15 ಕಿ. ಮೀ. ವಿದ್ಯುತ್‌ ಲೈನ್‌, 6 ವಿದ್ಯುತ್‌ ಪರಿವರ್ತಕಗಳಿಗೆ ಹಾನಿ ಸಂಭವಿಸಿದ್ದು, 25.42 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ದಿನೇಶ್‌ ಉಪಾಧ್ಯ ತಿಳಿಸಿದ್ದಾರೆ.

ದೊಡ್ಡಣಗುಡ್ಡೆ ಶಾಲೆಯ ಗೋಡೆ ಕುಸಿತ
36 ವಿದ್ಯಾರ್ಥಿಗಳು ಓದುತ್ತಿರುವ ದೊಡ್ಡಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟ ತಯಾರಿಸುವ ಕೊಠಡಿಯ ಒಂದು ಭಾಗದ ಗೋಡೆ ಕುಸಿದ ಅಘಾತಕಾರಿ ಘಟನೆ ರವಿವಾರ ರಾತ್ರಿ ಸಂಭವಿಸಿದೆ. ಎರಡು ವರ್ಷಗಳ ಹಿಂದೆ ದುರಸ್ತಿಯಾಗಿದ್ದ ಕೊಠಡಿಯ ಗೋಡೆ ಮಳೆ ನೀರಿಗೆ ಶಿಥಿಲಗೊಂಡು ಕುಸಿದಿದೆ ಎಂದು ಹೇಳಲಾಗಿದೆ. ಖಾಲಿ ಸಿಲಿಂಡರ್‌, ಮಕ್ಕಳು ಊಟ ಮಾಡುವ ಬಟ್ಟಲು, ಇನ್ನಿತರೆ ಪಾತ್ರೆ, ಬೆಂಚು, ಕುರ್ಚಿಗಳಿಗೆ ಹಾನಿಯಾಗಿದೆ. ಒಂದುವೇಳೆ ಹಗಲಿನಲ್ಲಿ ನಡೆದಿದ್ದರೆ ಮಕ್ಕಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿತ್ತು. ಉಡುಪಿ ಬಿಇಒ ಶಾಲೆಗೆ ಭೇಟಿ ನೀಡಿದ್ದು, ಹಳೆ ಕಟ್ಟಡ ಸಂಪೂರ್ಣ ತೆರವುಗೊಳಿಸಿ ಹೊಸ ಕಟ್ಟಡಕ್ಕೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ತಿಳಿಸಿದ್ದಾರೆ. ಮಕ್ಕಳ ಊಟೋಪಹಾರಕ್ಕೆ ಸಮಸ್ಯೆಯಾಗದಂತೆ ಬದಲಿ ವ್ಯವಸ್ಥೆ ಮಾಡಿ, ಬಾಳೆ ಎಲೆಯಲ್ಲಿ ಊಟ ಬಡಿಸಲಾಗಿದೆ ಎಂದು ಮುಖ್ಯಶಿಕ್ಷಕಿ ಪೂರ್ಣಿಮಾ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next