ಹುಣಸೂರು: ನಗರದಲ್ಲಿ ಶನಿವಾರ ಮಧ್ಯರಾತ್ರಿ ಸುರಿದ ಮಳೆಯಿಂದ ನ್ಯೂ ಮಾರುತಿ ಹಾಗೂ ಮಂಜುನಾಥ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ರಸ್ತೆಯಲ್ಲಿ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಮನೆ ಹಾಗೂ ತಂಬಾಕು ಬ್ಯಾರನ್ ಗಳಿಗೂ ಹಾನಿಯಾಗಿದೆ.
ಭಾರೀ ಮಳೆಯಿಂದಾಗಿ ಬಡಾವಣೆ ಮೇಲ್ಭಾಗದ ವಳ್ಳಿಯಮ್ಮನಕಟ್ಟೆ ತುಂಬಿ ಕೋಡಿ ಬಿದ್ದ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲದೆ ನ್ಯೂ ಮಾರುತಿ ಹಾಗೂ ಗೋಕುಲ ಬಡಾವಣೆಯ ಮನೆಗಳಿಗೆ ನುಗ್ಗಿದ್ದರೆ, ಮಂಜುನಾಥ ಬಡಾವಣೆಯ ರಸ್ತೆ ಮೇಲೆ ನೀರು ಹರಿದು ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ನೀರುನಲ್ಲಿ ಮುಳುಗಿ ಹೋಗಿದೆ. ಇನ್ನು ತಿಪ್ಪಲಾಪುರ ಹಾಗೂ ನಾಗನಹಳ್ಳಿಗಳಲ್ಲಿ ಮನೆ ಮತ್ತು ತಂಬಾಕು ಹದ ಮಾಡುವ ಬ್ಯಾರನ್ ಗಳಿಗೂ ಹಾನಿಯಾಗಿದೆ.
ಮಧ್ಯರಾತ್ರಿಯಲ್ಲಿ ಬಿದ್ದ ಮಳೆಯಿಂದಾಗಿ ಇದರ ಪರಿವೇ ಇಲ್ಲದೆ ಮಲಗಿದ್ದವರು, ಮನೆಯೊಳಗೆ ನೀರು ನುಗ್ಗಿದ್ದನ್ನು ಕಂಡು ಗಾಬರಿಯಾದರು, ಮನೆಯೊಳಗಿದ್ದ ವಸ್ತುಗಳಿಗೆ ಸಹ ಸಾಕಷ್ಟು ಹಾನಿಯಾಗಿದೆ. ರಾತ್ರಿ ಇಡೀ ನಿದ್ದೆ ಮಾಡದೆ ನೀರನ್ನು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು. ಈ ಭಾಗದ ರಸ್ತೆಗಳು ಕೆಸರುಮಯವಾಗಿದ್ದು, ಓಡಾಡಲಾರದಂಥ ಸ್ಥಿತಿಗೆ ತಲುಪಿದೆ.
ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಗಳಿಗೆ ನಗರಸಭಾ ಸದಸ್ಯ ಪ್ರೇಮಾನಂಜಪ್ಪ, ಶ್ರೀನಿವಾಸ್ , ಆರ್.ಐ. ಸೋಮಶೇಖರ್, ಪೌರಾಯುಕ್ತ ಶಿವಪ್ಪನಾಯ್ಕ, ಭೇಟಿ ನೀಡಿ ಪರಿಶೀಲಿಸಿದರು. 1990-92ರಲ್ಲಿ ಮಂಜುನಾಥ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದು, ನಗರಸಭೆಗೆ ಕಟ್ಟಬೇಕಿರುವ ಎಲ್ಲ ತೆರಿಗೆಗಳನ್ನು ಪಾವತಿಸಿದ್ದರೂ ಬಡಾವಣೆ ಅಭಿವೃದ್ಧಿಯಾಗಿಲ್ಲ, ಇಲ್ಲಿನ ದುರವಸ್ಥೆ ನಿಜಕ್ಕೂ ಬೇಸರ ಮೂಡಿಸಿದೆ.
ಪ್ರತಿ ಮಳೆಗಾದಲ್ಲಿ ಖಾಲಿ ನಿವೇಶನ ಹಾಗೂ ಹಳ್ಳದಲ್ಲಿ ನೀರು ನಿಂತು ಸೊಳ್ಳೆಗಳಿಗೆ ಆವಾಸ ಸ್ಥಾನಕ್ಕೆ ನಗರಸಭೆಯೇ ದಾರಿ ಮಾಡಿಕೊಟ್ಟಿದ್ದು, ನೆಮ್ಮದಿಯಾಗಿ ವಾಸಿಸಲಾಗದ ಪರಿಸ್ಥಿತಿ ಇದ್ದು, ಮಳೆ ನೀರು ಹರಿದು ಹೋಗಲು ಸುಸಜ್ಜಿತ ಚರಂಡಿ ಹಾಗೂ ರಸ್ತೆಗಳ ಡಾಂಬರೀಕರಣವಾಗಬೇಕಿದೆ ಎಂದು ಬಡಾವಣೆ ನಿವಾಸಿಗಳು ಆಗ್ರಸಿದ್ದಾರೆ.
ಮಂಜುನಾಥ ಬಡಾವಣೆಯಲ್ಲಿ ಸಂಗ್ರಹಗೊಂಡಿರುವ ಮಳೆ ನೀರನ್ನು ಸೋಮವಾರ ಹೊರ ಕಳುಹಿಸಲಾ ಗುವುದು. ಈಗಾಗಲೆ ಆದರ್ಶ ಶಾಲೆ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿ 35 ಲಕ್ಷ ರೂ ವೆಚ್ಚದಲ್ಲಿ ಮುಖ್ಯರಸ್ತೆಯಿಂದ ಛಾಯಾದೇವಿ ಸಂಸ್ಥೆವರೆಗೆ ಎರಡೂ ಕಡೆ ಚರಂಡಿ ಹಾಗೂ ರಸ್ತೆಗಳ ಅಭಿವೃದ್ಧಿಗೊಳಿಸಲಾಗುತ್ತದೆ.
-ಶಿವಪ್ಪನಾಯ್ಕ, ನಗರಸಭೆ ಪೌರಾಯುಕ್ತ