ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಳ್ಳಕೊಳ್ಳಗಳು ಮತ್ತು ಜಲಾಶಯ ಉಕ್ಕಿ ಹರಿಹರಿಯುತ್ತಿದೆ. ಉಡುತೊರೆಹಳ್ಳ ಜಲಾಶಯದ ನೀರಿನಲ್ಲಿ ಯುವಕ ಕೊಚ್ಚಿಹೋಗಿದ್ದು, ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದೆ. ಮೈದುಂಬಿ ಹರಿಯುತ್ತಿರುವ ಹಳ್ಳಕೊಳ್ಳಗಳು: ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ತಟ್ಟೆಹಳ್ಳ ಸೇರಿದಂತೆ ಈ ಭಾಗದ ಬಹುತೇಕ ಹಳ್ಳಗಳು ಮೈದುಂಬಿ ಹರಿಯುತ್ತಿವೆ.
ಜತೆಗೆ ರಾಮನಗುಡ್ಡೆ, ಹುಬ್ಬೆಹುಣಸೇ, ಕೌಳಿಹಳ್ಳ ಡ್ಯಾಂಗಳಲ್ಲಿ ನೀರು ಭರ್ತಿಯಾಗಿದೆಯಲ್ಲದೇ 28 ಅಡಿ ಅಳವಿರುವ ಉಡುತೊರೆ ಜಲಾಶಯದಲ್ಲಿ 22 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಇನ್ನೂ ನೀರು ಹರಿದು ಬರುತ್ತಿದೆ. ಹೀಗಾಗಿ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.
ಕೊಚ್ಚಿ ಹೋದವನ ರಕ್ಷಣೆ: ಮಂಗಳವಾರ ಸಂಜೆ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ಹುಯ್ಯಲನತ್ತ ಗ್ರಾಮಕ್ಕೆ ಆರು ಜನರ ತಂಡ ವಾಪಸ್ಸಾಗುತ್ತಿತ್ತು. ಈ ವೇಳೆ ಗ್ರಾಮ ಸಮೀಪದ ಉಡುತೊರೆಹಳ್ಳದಲ್ಲಿ ರುದ್ರ(21) ಎಂಬ ಯುವಕ ಹಳ್ಳವನ್ನು ದಾಟಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಆತನ ಸ್ನೇಹಿತರ ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರ ನೆರವಿನಿಂದ ಆತನನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಯುವಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ. ಯುವಕನ ರಕ್ಷಣಾ ಕಾರ್ಯದಲ್ಲಿ ಕೃಷ್ಣಮೂರ್ತಿ, ಬಸವರಾಜು, ಮಹೇಶ್ ಇನ್ನಿತರರು ಭಾಗವಹಿಸಿದ್ದರು
ಉಕ್ಕಿ ಹರಿದ ಹೂಗ್ಯಂ ಜಲಾಶಯ, ರಸ್ತೆ ಸಂಪರ್ಕಕ್ಕೆ ಅಡಚಣೆ: ಕ್ಷೇತ್ರ ವ್ಯಾಪ್ತಿಯ ಹೂಗ್ಯಂ ಜಲಾಶಯ ಕೂಡ ಭರ್ತಿಯಾಗಿ, ಹೊರಹರಿವು ಏರಿಕೆಯಾಗಿದೆ. ಪರಿಣಾಮ ಜಲಾಶಯದಿಂದ ಹೊರಬರುವ ನೀರು ಮತ್ತು ಹೂಗ್ಯಂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ಪಾಲಾರ್ ನದಿಯಲ್ಲಿನ ನೀರು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ನೀರು ಯಥೇತ್ಛವಾಗಿ ಹರಿಯುತ್ತಿದೆ. ಇದರ ಪರಿಣಾಮ ಹೂಗ್ಯಂ-ಕೊಳ್ಳೇಗಾಲ ಮತ್ತು ಮೀಣ್ಯಂ ರಾಮಾಪುರ ಮಾರ್ಗಗಳಲ್ಲಿನ ಹಳ್ಳಗಳು ತುಂಬಿ ಹರಿದ ಪರಿಣಾಮ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಸಂಚಾರ ಬಂದ್ ಆಗಿ ವಾಹನ ಸವಾರರು
ಪರದಾಡುವಂತಾಗಿತ್ತು.
ಕೆ.ಗುಂಡಾಪುರದಲ್ಲಿ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ: ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಬೆಳೆಗೆ ತೀವ್ರ ಹಾನಿಯಾಗಿದೆ. ಕೆ.ಗುಂಡಾಪುರ ಗ್ರಾಮದ ಗುರುನಾಯಕ್ ತಮ್ಮ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಜೋಳದ ಫಸಲಿಗೆ ಮಳೆ ನೀರು ನುಗ್ಗಿ ಜೋಳದ ಬೆಳೆಗೆ ಸಂಪೂರ್ಣ ಹಾನಿಯಾಗಿದೆ. ಪರಿಣಾಮ ಬೇಸಾಯಕ್ಕಾಗಿ ಹಾಕಲಾಗಿದ್ದ ಸಾವಿರಾರು ರೂ. ನಷ್ಟ ಉಂಟಾಗಿದೆ. ಸೂಕ್ತ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ