ಮುಂಬೈ: ಭಾರೀ ಮಳೆಯಿಂದ ತತ್ತರಿಸಿ ಹೋಗಿರುವ ಮುಂಬೈನಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ವರುಣಾಘಾತ ಹಿನ್ನಲೆ ಹವಾಮಾನ ಇಲಾಖೆ ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳಿಗೆ ರೆಡ್ ಅಲರ್ಟ್ ಘೋಷಣೇ ಮಾಡಿದ್ದು, ಮಳೆ ಕೊರತೆ ಎದುರಿಸುತ್ತಿರುವ ಲಾತೂರ್, ಬೀಢ್ ಮತ್ತು ನಾಂದೇಡ್ ಪ್ರದೇಶಗಳಿಗೂ ಸಹ ಹವಾಮಾನ ಇಲಾಖೆ ‘ಹಳದಿ ಎಚ್ಚರಿಕೆ’ ನೀಡಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಸೂಚನೆಯನ್ನು ರವಾನಿಸಿದೆ.
ಇತರ ಕಡೆಗಳಲ್ಲಿ ಪರಿಸ್ಥಿತಿ ಅವಲೋಕಿಸಿಕೊಂಡು ರಜೆ ನೀಡುವಂತೆ ಜಿಲ್ಲಾಡಳಿತಕ್ಕೆ ಮಹಾ ರಾಷ್ಟ್ರ ಶಿಕ್ಷಣ ಸಚಿವ ಆಶೀಶ್ ಶೆ್ಲ್ಲಾರ್ ಸೂಚನೆ ನೀಡಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಈ ಬಾರಿ ಸಮೃದ್ಧ ಮಳೆಯಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಇಲ್ಲಿಯವರೆಗೆ ನಗರದಲ್ಲಿ 915 ಮಿಲಿ ಮೀಟರ್ ಮಳೆಯಾಗಿರುವುದು ದಾಖಲೆಯಾಗಿದೆ. ಈ ಮುಂಗಾರು ಋತುವಿನಲ್ಲಿ ಮುಂಬಯಿ ನಗರದಲ್ಲಿ ಒಟ್ಟಾರೆಯಾಗಿ 2366 ಮಿಲಿಮೀಟರ್ ಮಳೆಯಾಗಿದ್ದು ಇದು ನಗರದಲ್ಲಿ ಪ್ರತೀವರ್ಷ ಸುರಿಯುವ ಸರಾಸರಿ ಮಳೆಗಿಂತ (1800 ಮಿ.ಮಿ.) 26 ಪ್ರತಿಶತ ಅಧಿಕವಾಗಿದೆ.