ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರದ ಮುಂಬಯಿ ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಬುಧವಾರ ಧಾರಾಕಾರ ಮಳೆಯಾಗಿದೆ. ರಾಯಗಡ, ನಾಸಿಕ್ ಮತ್ತು ಪುಣೆಯಲ್ಲಿ ತೀವ್ರ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಬ್ರೌನ್ ಅಲರ್ಟ್ ಘೋಷಿಸಿದೆ.
ಗುರುವಾರವೂ ಮುಂಬಯಿ, ಥಾಣೆ, ರಾಯಗಢ, ರತ್ನಗಿರಿಯಲ್ಲಿ ಭಾರೀ ಮಳೆಯಾಗಲಿದ್ದು, ಮಹಾರಾಷ್ಟ್ರದ ಇತರೆ ಭಾಗಗಳಲ್ಲಿ ಮಳೆಯ ಆರ್ಭಟ ತಗ್ಗಲಿದೆ ಎಂದೂ ಇಲಾಖೆ ಹೇಳಿದೆ.
ಹೆದ್ದಾರಿ ಬ್ಲಾಕ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದೆ. ಬುಧವಾರ ಹಲವೆಡೆ ಮಳೆಯಿಂದಾಗಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ಹೆದ್ದಾರಿಗೆ ಉರುಳಿ ಬಿದ್ದಿವೆ. ಪರಿಣಾಮ ಬದ್ರಿನಾಥ ಮತ್ತು ಕೇದಾರ ನಾಥಕ್ಕೆ ತೆರಳುವ ಹೆದ್ದಾರಿ ಬ್ಲಾಕ್ ಆಗಿದೆ. ಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗಂಗೆಯ ಉಪ ನದಿ ಹೆನ್ವಾಲ್‌ನ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತಟದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್‌ನಲ್ಲೂ ಬುಧವಾರ ಮಳೆಯಾಗಿದೆ.
ಮೃತರ ಸಂಖ್ಯೆ 55ಕ್ಕೆ
ಕೇರಳ ಪೆಟ್ಟಿಮುಡಿ ಭೂಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 55ಕ್ಕೇರಿದೆ. ಇನ್ನೂ 15 ಮಂದಿ ನಾಪತ್ತೆಯಾಗಿದ್ದು, ಸತತ 6ನೇ ದಿನವೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಶೋಧ ಕಾರ್ಯ ಮುಂದುವರಿಸಿದೆ.