Advertisement
ಇನ್ನು, ದಕ್ಷಿಣ ಮುಂಬಯಿನ ಕೊಲಾಬಾದಲ್ಲಿ ಕೇವಲ 12 ಗಂಟೆಗಳ ಅವಧಿಯಲ್ಲಿ 293 ಮಿ.ಮೀ., 24 ಗಂಟೆಗಳಲ್ಲಿ 332 ಮಿ.ಮೀ. ಮಳೆಯಾಗಿದೆ. ಇಲ್ಲಿ ಆಗಸ್ಟ್ ತಿಂಗಳ ಸರಾಸರಿ ಮಳೆ 493.8 ಮಿ.ಮೀ. ಆಗಿದ್ದು, ಈ ಬಾರಿ 7 ದಿನಗಳಲ್ಲೇ 675.4 ಮಿ.ಮೀ. ಮಳೆಯಾಗಿದೆ. ಮಹಾರಾಷ್ಟ್ರದಾದ್ಯಂತ ಶುಕ್ರವಾರವು ಮಳೆಯ ತೀವ್ರತೆ ಸ್ವಲ್ಪಮಟ್ಟಿಗೆ ತಗ್ಗಿದೆ. ಆದರೆ, ಮುಂದಿನ ವಾರ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಏಕೆಂದರೆ, ಆ.9ರಂದು ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ದಕ್ಷಿಣ ಕೊಂಕಣ ಪ್ರದೇಶದಲ್ಲಿ ಆ.11 ಮತ್ತು 13ರಂದು ಧಾರಾಕಾರ ಮಳೆಯಾಗಲಿದೆ ಎಂದು ಹೇಳಲಾಗಿದೆ.
Related Articles
ಕಳೆದ 2 ದಿನಗಳಲ್ಲಿ ಮುಂಬಯಿಯಾದ್ಯಂತ 361 ಮರಗಳು ಧರೆಗುರುಳಿವೆ. ಗಂಟೆಗೆ 70 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಹಾಗೂ ಮಳೆಯೇ ಇದಕ್ಕೆ ಕಾರಣ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಶುಕ್ರವಾರ ಸಚಿವ ಆದಿತ್ಯ ಠಾಕ್ರೆ ಅವರೊಂದಿಗೆ ಮಳೆ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ಗೋಡೆ ಕುಸಿತ ಸಂಭವಿಸಿದ ಪೆಡ್ಡಾರ್ ರಸ್ತೆಗೆ ಭೇಟಿ ನೀಡಿದ್ದು, ಉಂಟಾಗಿರುವ
ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸಿªದಾರೆ.
Advertisement
ಕಾವೇರಿ ತೀರದ ರೈತರಿಗೆ ಸಂಭ್ರಮ30 ವರ್ಷಗಳ ಬಳಿಕ ಭಾರೀ ಪ್ರಮಾಣದಲ್ಲಿ ಕುರುವಾಯಿ ಭತ್ತ ಬೆಳೆದಿರುವ ತಮಿಳುನಾಡಿನ ಕಾವೇರಿ ನದಿ ಮುಖಜಭೂಮಿ ಪ್ರದೇಶದ ರೈತರ ಮೊಗದಲ್ಲಿ ಸಂಭ್ರಮ ಮನೆಮಾಡಿದೆ. ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಇಳಿಕೆಯಾದ ಕಾರಣ ಆತಂಕಕ್ಕೀಡಾದ ರೈತರಿಗೆ ಕರ್ನಾಟಕದ ಕಬಿನಿ ಜಲಾಶಯ ದಿಂದ ನೀರು ಹರಿದುಬಂದಿರುವುದು ನೆಮ್ಮದಿ ತಂದಿದೆ. ಕರ್ನಾಟಕದ ಹಲವೆಡೆ ಪ್ರವಾಹ ತಲೆದೋರಿರುವ ಕಾರಣ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ. ಈಗಾಗಲೇ 43,933 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಕಾವೇರಿ ತೀರದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ನಾಳೆ ಕೇರಳದಲ್ಲಿ ಭಾರೀ ಮಳೆ
ಕೇರಳದ ಎರ್ನಾಕುಳಂ, ತೃಶೂರ್, ಪಾಲಕ್ಕಾಡ್, ಕಲ್ಲಿಕೋಟೆ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರವಿವಾರ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಪೆರಿಯಾರ್ ನದಿಯ ನೀರಿನ ಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ ಅಲುವಾ ಜಿಲ್ಲೆಯ ಪ್ರಸಿದ್ಧ ಶಿವ ದೇವಾಲಯವು ಭಾಗಶಃ ಮುಳುಗಡೆಯಾಗಿದೆ. 2018ರ ಪ್ರವಾಹದಲ್ಲಿ ಈ ದೇಗುಲವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಕೊಲ್ಲಾಪುರಕ್ಕೆ ಪ್ರವಾಹ ಭೀತಿ
ಕೊಲ್ಲಾಪುರ ಜಿಲ್ಲೆಯ ಪಂಚಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಗೆ ಪ್ರವಾಹಭೀತಿ ಎದುರಾಗಿದೆ. ಸುಮಾರು 4 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್‌ಡಿಆರ್‌ಎಫ್)ಯ 4 ತಂಡಗಳು ಕೊಲ್ಹಾಪುರಕ್ಕೆ ಧಾವಿಸಿವೆ. ಇನ್ನೂ ಎರಡು ತಂಡಗಳನ್ನು ಸಾಂಗ್ಲಿ ಮತ್ತು ಸತಾರಾದಲ್ಲಿ ನಿಯೋಜಿಸಲಾಗಿದೆ.