ಮುಂಬಯಿ: ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿರುವ ಮಹಾ ರಾಷ್ಟ್ರಕ್ಕೆ ಈಗ ಸೇನೆಯ ಆಗಮನವಾಗಿದೆ. ಹಲವು ಪ್ರದೇಶಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಕೋರಿಕೆ ಮೇರೆಗೆ ರಕ್ಷಣಾ ಕಾರ್ಯಕ್ಕಾಗಿ ನೌಕಾಪಡೆ, ವಾಯುಪಡೆ ಹಾಗೂ ಭೂಸೇನೆಯ ಸಿಬಂದಿ ಆಗಮಿಸಿದ್ದಾರೆ.
ರವಿವಾರ ಥಾಣೆ ಜಿಲ್ಲೆಯ ಗ್ರಾಮವೊಂದರಲ್ಲಿ ಸಿಲುಕಿದ್ದ 16 ಮಕ್ಕಳು ಸೇರಿದಂತೆ 58 ಮಂದಿಯನ್ನು ವಾಯುಪಡೆ ರಕ್ಷಿಸಿದೆ. ನೌಕಾಪಡೆಯ ಮೂರು ರಕ್ಷಣಾ ತಂಡಗಳು ಹಾಗೂ ಭೂಸೇನೆಯ 120 ಯೋಧರು ಥಾಣೆಗೆ ಆಗಮಿಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
400 ಮಂದಿ ಸ್ಥಳಾಂತರ: ಮುಂಬಯಿನ ಮೀಥಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಕಾರಣ ಸಮೀಪದ ಕ್ರಾಂತಿನಗರ ವಸತಿ ಪ್ರದೇಶದ ಸುಮಾರು 400 ಮಂದಿಯನ್ನು ರವಿವಾರ ಸ್ಥಳಾಂತರಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪಡೆ ಹೇಳಿದೆ.
ಪುಣೆಯಲ್ಲಿ ಅಲರ್ಟ್: ರವಿವಾರ ಮುತ್ತಾ ನದಿಯಿಂದ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಪುಣೆಯಲ್ಲಿನ ತಗ್ಗುಪ್ರದೇಶಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
45 ಗ್ರಾಮಸ್ಥರ ಏರ್‌ಲಿಫ್ಟ್: ದಕ್ಷಿಣ ಗುಜರಾತ್‌ನಲ್ಲೂ ಜಲಾವೃತಗೊಂಡ ಗ್ರಾಮಗಳ 45 ಮಂದಿ ಯನ್ನು ವಾಯುಪಡೆ ಏರ್‌ಲಿಫ್ಟ್ ಮಾಡಿದೆ. ಅಂಬಿಕಾ ಮತ್ತು ಪೂರ್ಣಾ ನದಿಗಳ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಲ್ಲಿನ 5 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಅಪಾಯ ಮಟ್ಟ ಮೀರಿದ ಗೋದಾವರಿ
ಗೋದಾವರಿ ನದಿಯು ಅಪಾಯದ ಮಟ್ಟ ಮೀರಿ ಹರಿಯ ತೊಡಗಿದ್ದು, ಗಂಗಾಪುರ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಪರಿಣಾಮ, ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿ ಪ್ರವಾಹ ತೀವ್ರಗೊಂಡಿದೆ. ರವಿವಾರ ಬೆಳಗ್ಗೆ 20 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಗೋದಾವರಿಯು 13 ಲಕ್ಷ ಕ್ಯುಸೆಕ್‌ನ ಗಡಿ ದಾಟಿ ಹರಿಯುತ್ತಿರುವ ಕಾರಣ, ಆಂಧ್ರಪ್ರದೇಶದ ದೋವಲೇಶ್ವರಂನಲ್ಲಿನ ಸರ್ ಆರ್ತರ್ ಕಾಟನ್ ಬ್ಯಾರೇಜ್‌ಗೆ ಎರಡನೇ ಬಾರಿ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಆಂಧ್ರದಲ್ಲಿ ಪ್ರವಾಹದಿಂದಾಗಿ 70 ಸಾವಿರ ಮಂದಿ ಅತಂತ್ರರಾಗಿದ್ದಾರೆ.