Advertisement

16 ಮನೆ ನಾಶ, 41.38 ಲಕ್ಷ  ರೂ.ನಷ್ಟ  :ಮೇಯರ್‌

09:50 AM Jun 02, 2018 | |

ಮಹಾನಗರ : ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಮಹಾ ಮಳೆಯ ಪರಿಣಾಮ 16 ಮನೆಗಳು ಸಂಪೂರ್ಣ ನಾಶವಾಗಿದ್ದು, ಒಟ್ಟು 41.38 ಲಕ್ಷ ರೂ. ನಷ್ಟವಾಗಿದೆ ಎಂದು ಮೇಯರ್‌ ಭಾಸ್ಕರ್‌ ತಿಳಿಸಿದ್ದಾರೆ. ಪಾಲಿಕೆಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ನಗರ ವ್ಯಾಪ್ತಿಯಲ್ಲಿ ಒಟ್ಟು 6 ಮನೆಗಳಿಗೆ ಭಾರೀ ಹಾನಿಯಾಗಿದ್ದು, 18 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದರು.

Advertisement

12 ವರ್ಷದಲ್ಲಿಯೇ ಅತೀ ಹೆಚ್ಚು ಮಳೆ
ಸಾಮಾನ್ಯವಾಗಿ ಮುಂಗಾರು ದ.ಕ. ಜಿಲ್ಲೆಗೆ ಜೂನ್‌ ಒಂದರ ಅನಂತರ ಪ್ರವೇಶವಾಗುತ್ತದೆ. ಆದರೆ ಮಂಗಳವಾರದ ಮಳೆ ಅನಿರೀಕ್ಷಿತವಾಗಿತ್ತು. ಈ ಮಳೆ 12 ವರ್ಷಗಳಲ್ಲಿ ಸುರಿದ ಅತೀ ಹೆಚ್ಚಿನ ಮಳೆಯಾಗಿದೆ. ಪ್ರತಿ ವರ್ಷದಂತೆ ಮಳೆಗಾಲಕ್ಕೆ ಮುಂಚಿತವಾಗಿ ಈ ಬಾರಿಯು ಪಾಲಿಕೆ ವ್ಯಾಪ್ತಿಯ ಬೃಹತ್‌
ತೋಡು ಮತ್ತು ಸಣ್ಣ ತೋಡುಗಳನ್ನು ಶೇ. 90ರಷ್ಟು ಸ್ವಚ್ಛಗೊಳಿಸಲಾಗಿತ್ತು. ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆಯಲಾಗಿತ್ತು ಎಂದು ಅವರು ಹೇಳಿದರು.

ಮಳೆ ನಿರಂತರ ಬಂದ ಹಿನ್ನೆಲೆಯಲ್ಲಿ ಮೇಲ್ಭಾಗದಲ್ಲಿ ಶೇಖರವಾಗಿದ್ದ ತ್ಯಾಜ್ಯಗಳು ಚರಂಡಿಗಳಲ್ಲಿ ಬಂದು ಸೇರಿ ನೀರು ಸರಾಗವಾಗಿ ಹರಿಯಲು ತೊಂದರೆಯಾದ ಕಾರಣ ಕೃತಕ ನೆರೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ಈ ಸಂದರ್ಭ ಸಾರ್ವಜನಿಕರು ಸಂಯಮದಿಂದ ವರ್ತಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಜತೆಯಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಕೂಡ ಸಹಾಯ ನೀಡಿವೆ ಎಂದು ಅವರು ಹೇಳಿದರು.

ಕೊಟ್ಟಾರ- ಪಂಪ್‌ವೆಲ್‌; ಹೆದ್ದಾರಿಯಿಂದಲೇ ಸಮಸ್ಯೆ
ನಗರದ 60 ವಾರ್ಡ್‌ಗಳಲ್ಲಿಯೂ ಮಳೆಗಾಲದ ಸಂದರ್ಭ ಎರಡು ತಿಂಗಳ ಅವಧಿಗೆ ಆರು ಮಂದಿಯ 60 ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಗ್ಯಾಂಗ್‌
ಗಳು ಜೇಸಿಬಿ ಮೂಲಕ ಚರಂಡಿ ಹೂಳೆತ್ತುವ ಕೆಲಸವನ್ನು ಮಾಡಿವೆ. ರಾತ್ರಿ ಪಾಳಯಕ್ಕೆ 2 ವಿಶೇಷ ಗ್ಯಾಂಗ್‌ಗಳನ್ನು ಮೀಸಲಿಡಲಾಗಿದೆ.

ಐದು ವಾರ್ಡ್‌ಗಳಿಗೆ ನೋಡಲ್‌ ಅದಿಕಾರಿಗಳನ್ನು ಸಮಸ್ಯೆ ಬಗೆಹರಿಸಲು ನೇಮಕ ಮಾಡಲಾಗಿದೆ. ಪಂಪ್‌ ವೆಲ್‌ ಹಾಗೂ ಕೊಟ್ಟಾರದಲ್ಲಿ ಸಂಭವಿಸಿದ ಕೃತಕ ನೆರೆಗೆ ರಾಷ್ಟ್ರೀಯ ಹೆದ್ದಾರಿಯ ಅಸಮರ್ಪಕ ಹಾಗೂ ವಿಳಂಬ ಗತಿಯ ಕಾಮಗಾರಿಯೇ ಕಾರಣ. ಪಂಪ್‌ವೆಲ್‌ನ ಮೇಲ್ಸೇತುವೆ ಕಾಮಗಾರಿ ಕಳೆದ ಸುಮಾರು ಐದು ವರ್ಷಗಳಿಂದ ನಡೆಯುತ್ತಿದೆ. ಮಳೆಗಾಲ ಆರಂಭವಾಗುವ ಕೆಲವು ದಿನಗಳ ಹಿಂದೆಯೇ ಇಲ್ಲಿ ರಸ್ತೆ ಅಗೆಯಲಾಗಿದೆ.
ಸರ್ವಿಸ್‌ ರಸ್ತೆಯನ್ನು ಕಲ್ಪಿಸಲಾಗಿಲ್ಲ. ಇವೆಲ್ಲದರ ಕಾರಣ ನೀರು ಹರಿದುಹೋಗುವ ತೋಡುಗಳು ಅನಿರೀಕ್ಷಿತ ಮಳೆಯಾಗಿ ಮಣ್ಣಿನಿಂದ ಮುಚ್ಚಿ ಸಮಸ್ಯೆಯಾಗಿದೆ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್‌ ಮುಹಮ್ಮದ್‌ ಕುಂಜತ್ತಬೈಲ್‌, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಆಳ್ವ, ಲತಾ ಸಾಲ್ಯಾನ್‌, ನವೀನ್‌ ಡಿ’ಸೋಜಾ, ಅಶೋಕ್‌ ಡಿ.ಕೆ. ಉಪಸ್ಥಿತರಿದ್ದರು.

ರಾಜಕಾಲುವೆ ಒತ್ತುವರಿ; ಡಿಸಿ ವರದಿ ಆಧರಿಸಿ ಕ್ರಮ
ರಾಜಕಾಲುವೆಗಳ ಒತ್ತುವರಿ ಕುರಿತಂತೆ ಜಿಲ್ಲಾಧಿಕಾರಿಯವರು ಈಗಾಗಲೇ ಸಮಿತಿ ರಚಿಸಿ ವರದಿಗೆ ಸೂಚಿಸಿದ್ದಾರೆ. ಆ ವರದಿ ಆಧಾರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಮಳೆಯಾದ ದಿನ ನಾನು ರಾತ್ರಿಯವರೆಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಂದು ರಾತ್ರಿ ಒಂದರವರೆಗೆ
ಪಾಲಿಕೆ ಕಚೇರಿಯಲ್ಲಿದ್ದು, ಪರಿಸ್ಥಿತಿ ಅವಲೋಕಿಸಿದ್ದೇನೆ ಎಂದು ಮೇಯರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next