Advertisement

ಗ್ರಾಮಾಂತರ ಪ್ರದೇಶದ ವಿವಿಧೆಡೆ ಗಾಳಿ-ಮಳೆಯಿಂದ ಭಾರೀ ಹಾನಿ

11:26 PM Aug 07, 2019 | Team Udayavani |

ಸಸಿಹಿತ್ಲು: ಹಳೆಯಂಗಡಿ ಗ್ರಾ.ಪಂ.ನ ವ್ಯಾಪ್ತಿಯ ಸಸಿಹಿತ್ಲು ಪ್ರದೇಶ ಬುಧವಾರ ತೀವ್ರವಾದ ಗಾಳಿ-ಮಳೆಗೆ ಮನೆಯೊಂದಕ್ಕೆ ಹಾನಿಯಾಗಿದ್ದು, ಮರಗಳು ರಸ್ತೆಗೆ ಬಿದ್ದು, ವಿದ್ಯುತ್‌ ಕಂಬಕ್ಕೆ ಹಾನಿಯಾಗಿದೆ.

Advertisement

ತೀವ್ರವಾದ ಗಾಳಿಗೆ ಸಸಿಹಿತ್ಲು ಅಳಿವೆ ಕೊಡಿಯ ನಿವಾಸಿ ಲಲಿತಾ ಪೂಜಾರಿ ಅವರ ಮನೆಯ ಮುಂಭಾಗದ ಹೆಂಚುಗಳು, ರೀಪು, ಪಕ್ಕಾಸು ಸಹಿತ ಹಾರಿದ್ದು ತಕ್ಷಣ ಅವರು ಮನೆಯ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮನೆಯ ಭಾಗಶಃ ಭಾಗವು ಸಂಪೂರ್ಣವಾಗಿ ಕುಸಿದಿದ್ದು ಸುಮಾರು 2 ಲಕ್ಷ ರೂ. ಗಳಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹಳೆಯಂಗಡಿ ಗ್ರಾ.ಪಂ.ನ ಸದಸ್ಯ ಅಶೋಕ್‌ ಬಂಗೇರ, ಅನಿಲ್, ಅನಿಲ್ ನೇತೃತ್ವದಲ್ಲಿ ಸ್ಥಳೀಯರು ಪ್ಲಾಸ್ಟಿಕ್‌ ಟಾರ್ಪಾಲನ್ನು ಅಳವಡಿಸಿ ತಾತ್ಕಾಲಿಕ ಪರಿಹಾರ ನೀಡಿ ಸ್ಪಂದಿಸಿದ್ದಾರೆ. ಸ್ಥಳಕ್ಕೆ ಮೂಲ್ಕಿಯ ವಿಶೇಷ ತಹಶೀಲ್ದಾರ್‌ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್‌ ರೋಡ್ಕಕರ್‌, ಗ್ರಾಮ ಕರಣಿಕ ಮೋಹನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಸ್ತೆಗೆ ಬಿದ್ದ ಮರಗಳು
ಸಮುದ್ರ ತೀರದಲ್ಲಿ ತೂಫಾನ್‌ನಂತಹ ಗಾಳಿ ಬೀಸಿದ್ದು ನೂತನ ಶ್ರೀಯಾನ್‌ ಅವರ ಮನೆಯ ಪಕ್ಕದಲ್ಲಿಯೇ ಮರಗಳು ಸಾಲುಸಾಲಾಗಿ ರಸ್ತೆಗೆ ಬಿದ್ದು ರಸ್ತೆ ಸಂಪೂರ್ಣ ಬಂದಾಗಿ ತಾಸುಗಟ್ಟಲೇ ಸಂಚಾರ ಸ್ಥಗಿತಕೊಂಡಿತ್ತು. ಸ್ಥಳೀಯರ ಸಹಾಯದಿಂದ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ರಸ್ತೆ ಪಕ್ಕದ ವಿದ್ಯುತ್‌ ಕಂಬವು ಸಹ ವಾಲಿದ್ದು ಮೆಸ್ಕಾಂ ಇಲಾಖೆಗೆ ದೂರು ನೀಡಲಾಗಿದೆ. ಸಮುದ್ರದ ಅಲೆಗಳು ಸಹ ತೀವ್ರವಾಗಿದೆ. ಸಸಿಹಿತ್ಲು ಬೀಚ್ ಬಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಹಳೆಯಂಗಡಿ: ಕುಬಲಗುಡ್ಡೆಯ ವಿಶ್ವಾಸ್‌ ಅವರ ಮನೆಯ ಮೇಲೆ ತೆಂಗಿನ ಮರವು ಬುಡ ಸಹಿತ ನೇರವಾಗಿ ಮನೆಯ ಭಾಗದ ಮೆಲ್ಛಾವಣಿಗೆ ಬಿದ್ದ ಪರಿಣಾಮ ಸುಮಾರು 50 ಸಾವಿರ ರೂ. ಹಾನಿಯಾಗಿದೆ. ಮೇಲ್ಛಾವಣಿಯ ಹೆಂಚು, ರೀಪು, ಪಕ್ಕಾಸು ಧರಶಾಯಿಯಾಗಿದ್ದು, ಮನೆಯ ಗೋಡೆಗೆ ಹಾನಿಯಾಗಿದೆ. ಮನೆ ಮಂದಿ ಒಳ ಕೋಣೆಯಲ್ಲಿದ್ದುದರಿಂದ ಯಾವುದೇ ಜೀವಕ್ಕೆ ಹಾನಿಯಾಗಿಲ್ಲ.

Advertisement

ಸ್ಥಳಕ್ಕೆ ಗ್ರಾ. ಪಂ. ಸದಸ್ಯ ವಿನೋದ್‌ಕುಮಾರ್‌ ಕೊಳುವೈಲು, ಎಸ್‌.ಎಸ್‌. ಸತೀಶ್‌ ಭಟ್, ಗ್ರಾಮ ಕರಣಿಕ ಮೋಹನ್‌ ಹಾಗೂ ಸಹಾಯಕ ನವೀನ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರಕ್ಕಾಗಿ ವರದಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ನಂದಿನಿ ನದಿ

ಕಿಲೆಂಜೂರು: ಮಂಗಳವಾರ ಸುರಿದ ಭಾರೀ ಮಳೆಗೆ ನಂದಿನಿ ನದಿ ಉಕ್ಕಿ ಹರಿಯುತ್ತಿದೆ, ಅತ್ತೂರು, ಕಿಲೆಂಜೂರು, ಕೊಡೆತ್ತೂರು, ಮಿತ್ತಬೈಲ್ ಪ್ರದೇಶದಲ್ಲಿ ತಗ್ಗು ಪ್ರದೇಶ ಜಲಾವೃತವಾಗಿದೆ, ಅತ್ತೂರುಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಿದೆ.

ಎಡಪದವು: ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಮುತ್ತೂರು ಪಂಚಾಯತ್‌ ವ್ಯಾಪ್ತಿಯ ಶಾಂತಿಪಲ್ಕೆ ಎಂಬಲ್ಲಿನ ನಿವಾಸಿ ಭಾಗೀರಥಿ ನಾಯ್ಕ ಎಂಬವರ ಮನೆಗೆ ಹಿಂಭಾಗದಲ್ಲಿದ್ದ ಮರವೊಂದು ಉರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮನೆಯ ಗೋಡೆ, ಶೌಚಾಲಯ, ಮಾಡುವಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ತಾಪಂ ಸದಸ್ಯ ನಾಗೇಶ್‌ ಶೆಟ್ಟಿ. ಜಿಪಂ ಎಂಜಿನಿಯರ್‌ ವಿಶ್ವನಾಥ್‌, ಪಂ. ಅಧ್ಯಕರು, ಪಿಡಿಓ ವಸಂತಿ, ಗ್ರಾಮಕರಣಿಕ ದೇವರಾಯ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next