Advertisement

ಮಲೆನಾಡಲ್ಲಿ ಧಾರಾಕಾರ ಮಳೆ: ತುಂಗಭದ್ರೆಗೆ ಜೀವಕಳೆ

03:59 PM Aug 07, 2020 | Suhan S |

ಹೊನ್ನಾಳಿ: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಮಳೆಯಿಂದ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದ ತುಂಗಾ ನದಿಗೆ 50 ಸಾವಿರ ಕ್ಯೂಸೆಕ್‌ಗಳಿಗೂ ಅಧಿಕ ಪ್ರಮಾಣದ ನೀರನ್ನು ಹರಿಬಿಟ್ಟಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಭದ್ರಾ ನದಿಪಾತ್ರದ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೂ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಜಲಾಶಯವನ್ನು ನಂಬಿ ಕೃಷಿ ಮಾಡುತ್ತಿರುವ ದಾವಣಗೆರೆ ಜಿಲ್ಲೆಯ ರೈತರಲ್ಲಿ ಇದು ಹರ್ಷ ಮೂಡಿಸಿದೆ. ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಎಂಬ ಕಾರಣಕ್ಕೆ ರೈತರು ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳಬೇಕೋ, ಬೇಡವೋ ಎಂಬ ದ್ವಂದ್ವದಲ್ಲಿದ್ದರು. ಈಗ ಉತ್ತಮ ಮಳೆ ಸುರಿದು ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಭದ್ರಾ ಜಲಾಶಯಕ್ಕೆ 22,203 ಕ್ಯೂಸೆಕ್‌ ಒಳ ಹರಿವು, 2180 ಕ್ಯೂಸೆಕ್‌ ಹೊರ ಹರಿವು ಇತ್ತು. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಕಳೆದ ನಾಲ್ಕು ದಿನಗಳಿಂದ ಮಲೆನಾಡು ಹಾಗೂ ಅಚ್ಚುಕಟ್ಟು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯ ಬಹುತೇಕ ತುಂಬುವ ಹಂತದಲ್ಲಿದೆ ಎನ್ನಲಾಗಿದೆ. ತುಂಗಭದ್ರಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ಹೊನ್ನಾಳಿ-ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿನ ನದಿ ದಂಡೆಗಳಲ್ಲಿ ಜನರು ಓಡಾಡಬಾರದು, ಜಾನುವಾರುಗಳನ್ನು ಮೇಯಿಸುವುದಾಗಲೀ, ಇನ್ನಾವುದೇ ಚಟುವಟಿಕೆಗಳನ್ನಾಗಲೀ ಮಾಡಬಾರದು ಎಂದು ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next