Advertisement

ಸುಬ್ರಹ್ಮಣ್ಯ: ಮನೆ ಮೇಲೆ ಗುಡ್ಡ ಕುಸಿದು ದುರಂತ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳ ಸಾವು

12:48 AM Aug 02, 2022 | Team Udayavani |

ಸುಬ್ರಹ್ಮಣ್ಯ: ಭಾರೀ ಮಳೆ ಸುರಿಯುತ್ತಿರುವ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

Advertisement

ಪರ್ವತಮುಖಿ ನಿವಾಸಿ ಮೂಲತಃ ಪಂಜದ ಕರಿಮಜಲು ಕುಸುಮಾಧರ ಅವರ ಮನೆಯ ಮೇಲೆ ಗುಡ್ಡ ಕುಸಿದಿದ್ದು, ಅವರ ಮಕ್ಕಳಾದ ಶ್ರುತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಕೊಂಡಿದ್ದರು. ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು, ಮಕ್ಕಳು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು.

ಮನೆಯಲ್ಲಿ ಒಟ್ಟು ಐವರು ಇರುತ್ತಿದ್ದರು. ಘಟನೆ ನಡೆದ ಸಂದರ್ಭ ತಂದೆ ಅಂಗಡಿಗೆ ಹೋಗಿದ್ದರು. ತಾಯಿ ರೂಪಾಶ್ರೀ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರು.

ಮೃತ ಮಕ್ಕಳ ತಂದೆ ಕುಸುಮಾಧರ ಅವರು ಸುಬ್ರಹ್ಮಣ್ಯದ ಸರಕಾರಿ ಆಸ್ಪತ್ರೆ ಬಳಿ ಸಣ್ಣ ಅಂಗಡಿ ನಡೆಸುತ್ತಿದ್ದು ಉದಯವಾಣಿ ಸಹಿತ ವಿವಿಧ ಪತ್ರಿಕೆಗಳ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಭಾರೀ ಸದ್ದು: ಓಡಿದ ಮಕ್ಕಳು
ಸೋಮವಾರ ಸಂಜೆಯಿಂದಲೇ ಈ ಪರಿಸರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ನದಿಪಾತ್ರದಲ್ಲಿ ನೀರಿನ ರಭಸ ಹೆಚ್ಚುತ್ತಿತ್ತು. ಸಂಜೆ 7 ಗಂಟೆ ಸುಮಾರಿಗೆ ಒಮ್ಮೆಲೇ ಭಾರೀ ಜೋರಾದ ಶಬ್ದ ಕೇಳಿಸಿತ್ತು. ಈ ವೇಳೆ ಮನೆಯ ಜಗಲಿಯಲ್ಲಿ ಓದುತ್ತಿದ್ದ ಶ್ರುತಿ ಪುಸ್ತಕವನ್ನು ಅಲ್ಲಿಯೇ ಬಿಟ್ಟು ಶಬ್ದ ಮನೆಯ ಒಳಗಿಂದ ಬಂದಿರಬಹುದು ಎಂದು ಅತ್ತ ಓಡಿದಳು. ಅಡುಗೆಯಲ್ಲಿ ನಿರತರಾಗಿದ್ದ ತಾಯಿ ಅದೇ ಕ್ಷಣ ಶಬ್ದಕ್ಕೆ ಹೆದರಿ ಮಕ್ಕಳು ಹೊರಗಿದ್ದಾರೆ ಎಂದು ಹೊರಗಡೆ ಧಾವಿಸಿದರು.

Advertisement

ಸಣ್ಣ ಮಗಳು ಮನೆಯ ಒಳಗೆ ಚಾವಡಿಯಲ್ಲಿದ್ದು, ದೊಡ್ಡವಳು ಕೂಡ ಅಲ್ಲಿಗೆ ತಲುಪಿದ್ದರು. ಇದೇ ಸಂದರ್ಭ ಗುಡ್ಡ ಮನೆಯ ಮೇಲೆಯೇ ಕುಸಿಯಿತು. ಮನೆಯಲ್ಲಿದ್ದ ಇನ್ನೋರ್ವರು ಈ ಸಂದರ್ಭ ಹೊರಗೆ ಬಂದಾಗಿತ್ತು.

ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿ
ಭಾರೀ ಮಳೆಯಿಂದಾಗಿ ಮರ ಬಿದ್ದು ಹಾಗೂ ನೀರು ಉಕ್ಕಿ ಹರಿದು ಸಂಪರ್ಕ ಸಾಧ್ಯವಿರುವ ಎರಡು ಕಡೆಯಿಂದಲೂ ರಸ್ತೆ ಸಂಪೂರ್ಣವಾಗಿ ಬಂದ್‌ ಆಗಿದ್ದರಿಂದ ಘಟನ ಸ್ಥಳಕ್ಕೆ ಶೀಘ್ರ ತೆರಳಲು ಸಾಧ್ಯವಾಗಿರಲಿಲ್ಲ. ತಡರಾತ್ರಿ ಸುರಿಯುತ್ತಿದ್ದ ಮಳೆಯೂ ರಕ್ಷಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇದರಿಂದಾಗಿ ಜೆಸಿಬಿ ಸ್ಥಳಕ್ಕೆ ತಲುಪುವಾಗ ಸುಮಾರು ಒಂದು ಗಂಟೆ ವಿಳಂಬವಾಗಿತ್ತು.

ಈ ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ಉದಯವಾಣಿ ಹಿಂದೆ ವರದಿ ಪ್ರಕಟಿಸಿತ್ತು. ಈ ವೇಳೆ ಅಲ್ಲಿರುವ ಕೆಲವು ಮರಗಳನ್ನು ತೆರವುಗೊಳಿಸಲಾಗಿತ್ತೇ ವಿನಾ ಗುಡ್ಡ ಕುಸಿತ ತಡೆಯುವ ಬಗ್ಗೆ ಗಂಭೀರ ಪ್ರಯತ್ನ ನಡೆಸಿರಲಿಲ್ಲ. ಕಾನೂನಿನ ನೆಪ ಹೇಳಿ ಇಲಾಖೆ ಸುಮ್ಮನಾಗಿತ್ತು ಎನ್ನಲಾಗಿದೆ.

ಭಾರೀ ಮಳೆಯಿಂದ ಮುಳುಗಡೆಯಾದ ಮನೆಮಂದಿಗೆ ಕುಕ್ಕೆ ದೇವಸ್ಥಾನದ ವತಿಯಿಂದ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡ ಲಾಗಿದೆ.

ಮಕ್ಕಳು ಕೈ-ಕೈ ಹಿಡಿದುಕೊಂಡಿದ್ದರು
ಮಣ್ಣಿನಡಿ ಸಿಲುಕಿದ ಸೋದರಿಯರನ್ನು ದೀರ್ಘ‌ ಕಾರ್ಯಾಚರಣೆಯ ಬಳಿಕ ಮೇಲ ಕ್ಕೆತ್ತುವ ಸಂದರ್ಭ ಇಬ್ಬರೂ ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡ ಸ್ಥಿತಿಯಲ್ಲಿದ್ದರು. ಅದಾಗಲೇ ಪ್ರಜ್ಞೆ ಕಳೆದುಕೊಂಡಿದ್ದರು. ಇದನ್ನು ನೋಡಿದ ಸ್ಥಳೀಯರೆಲ್ಲರೂ ಮಕ್ಕಳು ಬದುಕಿ ಬರಲಿ ಎಂದು ಪ್ರಾರ್ಥಿಸಿದ್ದರು. ಆದರೆ ಅವರ ಪ್ರಾರ್ಥನೆ ಈಡೇರಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next