Advertisement

ಕೌರಿ ಗ್ರಾಮದಲ್ಲಿ ಮಳೆಯ ರುದ್ರ ನರ್ತನ : ಕೊಚ್ಚಿ ಹೋದ ಮೋರಿ, ಬೆಳೆ ನಾಶ

07:49 PM Jul 28, 2021 | Team Udayavani |

ತೀರ್ಥಹಳ್ಳಿ: ಕವಲೇದುರ್ಗ ಕೋಟೆಯ ಪಶ್ಚಿಮ ಭಾಗದ ಕೆಳಭಾಗದಲ್ಲಿರುವ ಕುಗ್ರಾಮ ಕೌರಿಯಲ್ಲಿ ಕವಲೇದುರ್ಗ ಗುಡ್ಡದ ತಪ್ಪಲಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಕೌರಿ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ಹರಿದ ನೀರು ಹಳ್ಳದ ಕಟ್ಟೆಯೊಡೆದು ಭತ್ತದ ಸಸಿ ಹಾಕಿದ್ದ ಗದ್ದೆಗಳ ಮೇಲೆ ತನ್ನ ಪಥವನ್ನೆ ಬದಲಿಸಿ ಹರಿದ ಪರಿಣಾಮ ಸುಮಾರು 30-40 ಎಕರೆ ವಿಸ್ತೀರ್ಣದ ಗದ್ದೆಗಳೆಲ್ಲ ಕಲ್ಲು, ಮರಳು , ಮಣ್ಣುಗಳಿಂದ ಆವರಿಸಿಕೊಂಡಿದ್ದು, ಭಾರಿ ನಷ್ಟವಾಗಿದೆ. ಮಾತ್ರವಲ್ಲದೆ ಆ ಭಾಗದ ಗ್ರಾಮಸ್ಥರು ಈ ಸಲ ಭತ್ತದ ನಾಟಿ ಮಾಡುವುದೂ ದುಸ್ತರವಾಗಿದೆ.

Advertisement

ಯಡೂರು ಗ್ರಾಮ ಪಂಚಾಯತಿಯ ಕೌರಿ ಗ್ರಾಮದ ಸರ್ವೆ ನಂ.13 ರಲ್ಲಿ ಬರುವ ಈ ಜಾಗದಲ್ಲಿರುವ ಹಳ್ಳದಲ್ಲಿ ಹಿಂದೆಂದೂ ಹರಿಯದಿರುವಷ್ಟು ನೀರು ಈ ಬಾರಿ ಉಕ್ಕಿ ಹರಿದಿದ್ದರಿಂದ ಮುಖ್ಯ ರಸ್ತೆಯಿಂದ ಕೌರಿ ಗ್ರಾಮವನ್ನು ಸಂಪರ್ಕಿಸುವ ರಸ್ತೆಯಲ್ಲಿರುವ ಮೋರಿಯೂ ಒಡೆದು ಮೋರಿಯಡಿಯ ದೊಡ್ಡ ಗಾತ್ರದ ಪೈಪುಗಳೆಲ್ಲ ಚಲ್ಲಪಿಲ್ಲಿಯಾಗಿ ನೆರೆ ನೀರಲ್ಲಿ ಕೊಚ್ಚಿ ಹೋಗಿದ್ದು, ಮಾಗಲು, ಶೆಟ್ಟಿಕೊಪ್ಪ, ಬಿಚ್ಚಾಡಿ ಗ್ರಾಮಗಳೆಲ್ಲ ಈಗ ದ್ವೀಪಗಳಾಗಿವೆ.

ಈ ಗ್ರಾಮಗಳನ್ನು ಸೇರುವ ರಸ್ತೆಯಲ್ಲಿ ಬರುವ ಮತ್ತೊಂದು ಮೋರಿಯೂ ಹೀಗೇ ಹಳ್ಳದ ನೆರೆಯಿಂದಾಗಿ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ತೊಡೆಯವರೆ ಅಪಾಯಕಾರಿ ಹರಿಯುತ್ತಿರುವ ಹಳ್ಳದ ನೀರನ್ನೇ ದಾಟಿಕೊಂಡು ಮುಖ್ಯ ರಸ್ತೆಗೆ ಬರಬೇಕಾಗಿದೆ. ಮಕ್ಕಳು,‌ ವಯಸ್ಸದಾವರಂತೂ ಇಲ್ಲಿ ತಿರುಗಾಡುವಂತೆಯೇ ಇಲ್ಲ. ಇನ್ನು ಯಾರಿಗಾದರೂ ಅನಾರೋಗ್ಯವಾದರಂತೂ ಆ ದೇವರೆ ಗತಿ ಬಿಡಿ !!

ಯಡೂರು ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಕೌರಿ ಗ್ರಾಮದಿಂದ ಹೊಸನಗರಕ್ಕೆ 48 ಕಿ.ಮಿ. ದೂರವಾಗುತ್ತದೆ. ತೀರ್ಥಹಳ್ಳಿಗೆ ಕೇವಲ 20 ಕಿ.ಮಿ. ತೀರ್ಥಹಳ್ಳಿ ತಾಲೂಕಿನ ಗಡಿ ಭಾಗದಲ್ಲಿಯೆ ಈ ಗ್ರಾಮವಿದ್ದರೂ, ಇಲ್ಲಿನ ಗ್ರಾಮಸ್ಥರು ತಮ್ಮ ಜಮೀನಿಗೆ ಸಂಬಂಧಿಸಿದ ಮತ್ತು ನ್ಯಾಯಾಲಯ ಹಾಗೂ ಇತರ ಸರ್ಕಾರಿ ಕೆಲಸಗಳಿಗೆ ದೂರದ ಹೊಸನಗರಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ.

Advertisement

ಈಗಂತೂ ರಸ್ತೆಯ ಮೋರಿಯೂ ಕೊಚ್ಚಿ ಹೋಗಿ ತಮ್ಮ ಗದ್ದೆಗಳ ಮೇಲೆಲ್ಲ ಮೂರ್ನಾಲ್ಕು ಅಡಿ ಮರಳು , ಕಲ್ಲು ಬಂದು ನಿಂತಿದೆ ಗ್ರಾಮಸ್ಥರಿಗೆ ದಾರಿಯೇ ಕಾಣದಂತಾಗಿದ್ದು, ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ.

ಕೌರಿ ಗ್ರಾಮದ ನಾಗರತ್ನ ಹಾಗೂ ಸುರೇಂದ್ರ ಶೆಟ್ಟಿಯವರ ಮನೆಯ ಪಕ್ಕದಲ್ಲಿಯೇ ಇರುವ ಹಳ್ಳದ ನೀರು ಧಾರಾಕಾರ ಮಳೆಯಿಂದಾಗಿ ಯದ್ವಾತದ್ವಾ ಹರಿದ ಪರಿಣಾಮವಾಗಿ ಮನೆಯ ಪಕ್ಕದಲ್ಲಿ ಮಣ್ಣು ಕುಸಿಯುತ್ತಿದ್ದು, ಮನೆಗೂ ಅಪಾಯವಾಗುವ ಆತಂಕವಿದೆ. ಮನೆಯಿಂದ ಗದ್ದೆಗೆ ಹೋಗಲು ಮಾಡಿಕೊಂಡಿದ್ದ ಕಾಲು ಸಂಕದ ಬುಡದಲ್ಲಿದ್ದ ರಕ್ಷಣಾ ಕಂಬವೂ ಕೊಚ್ಚಿ ಹೋಗಿದೆ.

ಹಳ್ಳದಲ್ಲಿ ಈ ರೀತಿಯಲ್ಲಿ ಯಾವತ್ತೂ ನೀರು ಬಂದಿರಲಿಲ್ಲ. ಹಳ್ಳದ ಬದಿಯಲ್ಲಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಕಟ್ಟಿದ್ದ ಕಲ್ಲಿನ ಪಿಚಿಂಗ್ ಮತ್ತು ತಡೆಗೋಡೆಗಳೆಲ್ಲ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ ಎಂದು ಸಂಕಷ್ಟಕ್ಕೊಳಗಾಗಿರುವ ಕೌರಿ ಗ್ರಾಮದ ಸುರೇಂದ್ರ ಶೆಟ್ಟಿಯವರು ತೀವ್ರ ಬೇಸರದಿಂದ ಹೇಳುತ್ತಾರೆ.

ಕೌರಿ ಗ್ರಾಮದಲ್ಲಿ ಭಾರಿ ಅನಾಹುತವಾಗಿದ್ದು, ಲಕ್ಷಾಂತರ ರೂ.ಗಳ ನಷ್ಟವಾಗಿದೆ. ಯಡೂರು ಪಂಚಾಯತಿ ಮತ್ತು ತಾಲೂಕು ಆಡಳಿತ ತುರ್ತಾಗಿ ಇವರ ನೆರವಿಗೆ ಬಂದು ಆತಂಕದಲ್ಲಿರುವ ಗ್ರಾಮಸ್ಥರಿಗೆ ಸಹಾಯ ಹಸ್ತ ಚಾಚಬೇಕಾಗಿದೆ. ಗ್ರಾಮವನ್ನು ಸಂಪರ್ಕಿಸುವ ಮೋರಿಯನ್ನು ಆದಷ್ಟು ಶೀಘ್ರವಾಗಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿದೆ. ಮರಳು, ಕಲ್ಲು ಜಮೆಯಾಗಿರುವ ಗದ್ದೆಗಳಲ್ಲಿ ನಾಟಿ ಮಾಡುವ ವ್ಯವಸ್ಥೆಯನ್ನು ಮಾಡಿ ಗ್ರಾಮಸ್ಥರ ಸಂಕಷ್ಟವನ್ನು ದೂರ ಮಾಡಬೇಕು.ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next