Advertisement

ಭಾರೀ ಮಳೆ: ಅಪಾರ ಹಾನಿ: ನಾಲ್ವರ ಸಾವು; ಹಲವು ಮನೆಗಳು ಕುಸಿತ

11:22 PM Sep 05, 2022 | Team Udayavani |

ಬೆಂಗಳೂರು: ರಾಜ್ಯದ ಹಲವೆಡೆ ಸೋಮವಾರವೂ ಮಳೆ ಮುಂದು ವರಿದಿದೆ. ಮಳೆ ಸಂಬಂಧಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ನೂರಾರು ಮನೆಗಳು ಕುಸಿತವಾಗಿದ್ದು, ಹಲವೆಡೆ ಕೆರೆ ಕೋಡಿ ಒಡೆದು ರಸ್ತೆ ಸಂಪರ್ಕ ಕಡಿತಗೊಂಡಿದೆ.

Advertisement

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಯ ನೆಲಮಂಗಲದಲ್ಲಿ 13 ಸೆಂ.ಮೀ. ಮಳೆಯಾಗಿದ್ದು ಇದು ರಾಜ್ಯದಲ್ಲಿಯೇ ಗರಿಷ್ಠವಾಗಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಮಳೆ ನೀರು ತುಂಬಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರವಿವಾರ ರಾತ್ರಿ ಸುರಿದ ಮಳೆಗೆ ಭೀಮೇಶ್ವರ ನದಿ ಉಕ್ಕಿ ಹರಿದಿದ್ದು, 75 ವರ್ಷಗಳ ಬಳಿಕ ಈ ನದಿಯಲ್ಲಿ ಈ ಪ್ರಮಾಣದ ನೀರು ಬಂದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ರವಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನ ತನಕ ಸುರಿದ ಮಳೆಗೆ ಹಲವು ಗ್ರಾಮಗಳು ಜಲಾವೃತಗೊಂಡಿವೆ. ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರ ಬಿಡುತ್ತಿರುವುದರಿಂದ ಸುವರ್ಣಾವತಿ ತುಂಬಿ ಹರಿಯುತ್ತಿದ್ದು, ನದಿ ದಡದ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳು ಜಲಾವೃತಗೊಂಡಿವೆ.

Advertisement

ನೀರಲ್ಲಿ ಕೊಚ್ಚಿ ಹೋದ ತೆಂಗಿನಕಾಯಿ
ತಾಲೂಕಿನ ಆಲೂರು ಮುಖ್ಯ ರಸ್ತೆ, ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಜಮೀನಿನಲ್ಲಿ ನೀರು ಹರಿಯುತ್ತಿರುವುದರಿಂದ ಮಹೇಶ್‌ ಎಂಬವರ ತೋಟದಲ್ಲಿದ್ದ ಸಾವಿರಾರು ತೆಂಗಿನ ಕಾಯಿ ನೀರುಪಾಲಾಗಿವೆ.

ವಿವಿಧೆಡೆ ನಾಲ್ವರ ಸಾವು
ಗೋಡೆ ಕುಸಿದು ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದ ಡಾ| ಅಂಬೇಡ್ಕರ್‌ ಬಡಾವಣೆಯ ಮೂರ್ತಿ(33) ಸಾವನ್ನಪ್ಪಿದ್ದಾರೆ. ಕೆರೆ ತುಂಬಿ ಕೋಡಿ ಹರಿಯುತ್ತಿದ್ದ ನೀರು ನೋಡಲು ಹೋಗಿದ್ದ ಗೋಪಿಕುಂಟೆ ಗ್ರಾಮದ ಮಹಾಲಿಂಗಪ್ಪ (22) ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಗೋಪಿಕುಂಟೆ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕುಷ್ಟಗಿಯ ಇಳಕಲ್‌ ತಾಲೂಕಿನ ದಮ್ಮೂರ ವ್ಯಾಪ್ತಿಯಲ್ಲಿ ಸಿಡಿಲು ಬಡಿದು ಕಾಟಾಪೂರ ಗ್ರಾಮದ ರೈತ ಸಣ್ಣನೀಲಪ್ಪ ಮಳಿಯಪ್ಪ ಹಾದಿಮನಿ (57) ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಸೂರ್ಯಕಾಂತಿ ಕಟಾವು ಕೆಲಸದಲ್ಲಿ ನಿರತರಾಗಿದ್ದಾಗ ದುರಂತ ಸಂಭವಿಸಿದೆ. ಚಿತ್ರದುರ್ಗದಲ್ಲಿ ಕುರಿಗಾಹಿ ಮಹಾಂತೇಶ್‌ (55) ಎಂಬವರು ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ನಾಯಕನಹಟ್ಟಿ ಠಾಣೆ ವ್ಯಾಪ್ತಿಯ ಮಲ್ಲೂರಹಟ್ಟಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಕುರಿ ಮೇಯಿಸಲು ತೆರಳಿದ್ದ ಅವರು ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ದುರಂತ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next