Advertisement

ಧಾರಾಕಾರ ಸುರಿದ ವರ್ಷಧಾರೆ : 154 ಮಿಮೀ ಮಳೆ

07:19 AM Jun 04, 2020 | mahesh |

ಕಾರವಾರ: ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ತಾಲೂಕುಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಬುಧವಾರ ಮಧ್ಯಾಹ್ನದವರೆಗೆ ಸುರಿಯಿತು. ಕಾರವಾರ, ಹೊನ್ನಾವರ
ತಾಲೂಕಿನಲ್ಲಿ ಭಾರೀ ಮಳೆ ಸುರಿಯಿತು. ಅಂಕೋಲಾ, ಕುಮಟಾ , ಭಟ್ಕಳ ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಘಟ್ಟದ ಮೇಲಿನ ತಾಲೂಕುಗಳಿಗೆ ಹೋಲಿಸಿದರೆ ಮುಂಗಾರಿನ ಅರ್ಭಟದ ದರ್ಶನವಾಯಿತು. ನಿಸರ್ಗ ಚಂಡಮಾರುತ ಮಂಗಳವಾರ ಸಂಜೆ ಹಾಗೂ ರಾತ್ರಿ ಗಂಟೆಗೆ 60ರಿಂದ 70 ಕಿ.ಮೀ.ಬೀಸಿದ ಪರಿಣಾಮ ಅನೇಕ ಮರಗಳು ನಗರದ ವಿವಿಧ ಕಾಲೋನಿಯಲ್ಲಿ ಧರೆಗೆ ಉರುಳಿದವು. ಬುಧವಾರ ಬೆಳಗ್ಗೆಯೂ ಗಾಳಿ ಸಹಿತ ರಭಸದ ಮಳೆ ಸುರಿಯಿತು. ಮಳೆ ಮಧ್ಯಾಹ್ನ 1.30ರ ವರೆಗೆ ಸತತವಾಗಿತ್ತು.

Advertisement

ಸತತ ಮಳೆಯಾದರೂ ಜನ ರೇನ್‌ಕೋಟ್‌ ಧರಿಸಿ ಎಂದಿನಂತೆ ನಗರದ ಪೇಟೆಯಲ್ಲಿ ತಿರುಗಾಡಿ, ಅಗತ್ಯ ವಸ್ತುಗಳನ್ನು ಕೊಂಡರು. ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರದಲ್ಲಿ ಭಾರೀ ಮಳೆ ಸುರಿಯಿತು. ಜೋಯಿಡಾದಲ್ಲಿ ಬಿದ್ದ ಮಳೆ ಅಣೆಕಟ್ಟುಗಳಿಗೆ ಹರಿಯಿತು. ಯಲ್ಲಾಪುರದಲ್ಲಿ ಮಳೆ ಜನ ಜೀವನವನ್ನು ಉಲ್ಲಾಸಗೊಳಿಸಿತು. ಮಂಗಳವಾರದಂತೆ ಬುಧವಾರ ಸಹ ವಿದ್ಯುತ್‌ ಕೈಕೊಟ್ಟಿತ್ತು. ಅಲ್ಲಲ್ಲಿ ಗಾಳಿಗೆ ವಿದ್ಯುತ್‌ ಕಂಬದ ಮೇಲೆ ಬಿದ್ದ ಮರಗಳನ್ನು ಹೆಸ್ಕಾಂ ಸಿಬ್ಬಂದಿ ಸರಿಪಡಿಸುವುದರಲ್ಲಿ ನಿರತರಾಗಿದ್ದರು. ಕಡಲಿಗೆ ಇಳಿಯದ ಮೀನುಗಾರರು: ನಿಸರ್ಗ ಚಂಡಮಾರುತ ರುದ್ರ ನರ್ತನ ತೋರಿಸಿ ಹೋದ ಕಾರಣ ಮೀನುಗಾರರು ಕಡಲಿಗೆ ಇಳಿಯಲಿಲ್ಲ. ಮೀನುಗಾರಿಕಾ ಬೋಟ್‌ಗಳು ದಡದಲ್ಲಿ ಬೀಡು ಬಿಟ್ಟಿದ್ದವು. ಮೀನುಗಾರಿಕೆ ಸ್ತಬ್ಧವಾಗಿತ್ತು.

ಹೊನ್ನಾವರದಲ್ಲಿ ಹಾನಿ ಹೊನ್ನಾವರ: ತಾಲೂಕಿನಾದ್ಯಂತ ಗಾಳಿ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದೆ. ಖರ್ವಾದಲ್ಲಿ ಮನೆಯೊಂದು ಕುಸಿದು 28 ಸಾವಿರ ರೂ.,
ಹಡಿನಬಾಳನಲ್ಲಿ ಒಂದು ಮನೆ ಜಖಂಗೊಂಡು 5 ಸಾವಿರ ರೂ. ಹಾನಿಯಾಗಿದೆ. ಮರ ಬಿದ್ದು ವಿದ್ಯುತ್‌ ಕಂಬಗಳು ಧರೆಗುರುಳುತ್ತಿದ್ದು, ಹೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸರಿಪಡಿಸಲು
ಹಗಲುರಾತ್ರಿ ಶ್ರಮಪಡುತ್ತಿದ್ದಾರೆ. ತೀರಾ ಗ್ರಾಮೀಣ ಭಾಗದ ವರದಿಗಳು ಇನ್ನೂ ಬರಬೇಕಾಗಿದೆ.

ಮುಂಡಗೋಡನಲ್ಲಿ ಉತ್ತಮ ಮಳೆ ಮುಂಡಗೋಡ: ಬುಧವಾರ ಮಧ್ಯಾಹ್ನದ ವೇಳೆ ತಾಲೂಕಿನಾದ್ಯಂತ ತ್ತಮ ಮಳೆ ಸುರಿಯಿತು. ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸೋಮವಾರ ಹಾಗೂ ಬುಧವಾರ ನಸುಕಿನಲ್ಲಿ ಸಾಧಾರಣ ಮಳೆಯಾಗಿತ್ತು ಬುಧವಾರ ಮಧ್ಯಾಹ್ನ ವೇಳೆಗೆ ಉತ್ತಮ ಮಳೆ ಸುರಿಯಿತು. ತಾಲೂಕಿನ ಶಿಡ್ಲಗುಂಡಿ ಬಳಿಯಿರುವ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಮುಂಡಗೋಡ ಹಾಗೂ ಯಲ್ಲಾಪುರ ಮಧ್ಯ ವಾಹನಗಳ ಸಂಚಾರ ಬಂದ್‌ ಆಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಗೆ ಶಿಡ್ಲಗುಂಡಿಯ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ನೂತನ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಆದರೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಚಿಕ್ಕ ಸೇತುವೆ ನಿರ್ಮಿಸಲಾಗಿತ್ತು. ಮೇಲ್ಭಾಗದಲ್ಲಿ ಮಳೆ ಸುರಿದರೆ ನೀರು ಹರಿದು ಬಂದು ತಾತ್ಕಾಲಿಕ ಸೇತುವೆ ಮುಳುಗಡೆಯಾಗುತ್ತಿದ್ದು, ಬುಧವಾರ ಮಧ್ಯಾಹ್ನ ಸುರಿದ ಮಳೆಗೆ ಶಿಡ್ಲಗುಂಡಿಯ
ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿದು ಸಂಚಾರ ಬಂದ್‌ ಆಯಿತು.

Advertisement

Udayavani is now on Telegram. Click here to join our channel and stay updated with the latest news.

Next