ಆಳಂದ: ಜೂನ್ ತಿಂಗಳಲ್ಲೇ ಬರಬೇಕಾಗಿದ್ದ ಮಳೆ ಕಳೆದ ಮೂರು ದಿನಗಳಿಂದ ಎಡೆಬಿಡದೇ ಸುರಿಯತೊಡಗಿದ್ದರಿಂದ ಕೃಷಿ, ವ್ಯಾಪಾರ, ವಹಿವಾಟಿಗೆ ಅಡ್ಡಿಯಾಗಿದೆ.
ಜಿಲ್ಲಾಧಿಕಾರಿಗಳು ಶನಿವಾರ ಶಾಲೆ, ಕಾಲೇಜಿಗೆ ರಜೆ ಘೋಷಿಸಿದ್ದಾರೆ. ಜನಜೀವನ ಜತೆಗೆ ಬಿತ್ತನೆಗೆ ಅಡ್ಡಿಯಾಗಿದೆ. ಇದರ ಜತೆಯಲ್ಲಿ ಜಾನುವಾರುಗಳಿಗೂ ಮೇಯಲು ಹೋಗದಂತಾಗಿದೆ. ಬಿತ್ತನೆ ಕೈಗೊಳ್ಳಲು ಮುಂದಾದವರಿಗೆ ದಿನದೊಡುವಂತೆ ಮಾಡಿದೆ.
ಶನಿವಾರ ಬೆಳಗ್ಗೆಯಿಂದಲೂ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಸಂಜೆಗೆ ಬಿರುಸುಗೊಂಡಿದೆ. ಇದರಿಂದ ಪಟ್ಟಣದಲ್ಲೆಡೆ ಚರಂಡಿಗಳು ತುಂಬಿ ಹರಿದಿವೆ. ರಸ್ತೆ ಮೇಲೆ ನೀರು ನಿಂತ ಪರಿಣಾಮ ಜನಸಂಚಾರಕ್ಕೆ ಪರದಾಡಿದರು.
ತಾಲೂಕಿನ ಸಾಲೆಗಾಂವ್, ಖಜೂರಿ, ನಿರಗುಡಿ, ವಿಕೆ, ಸಲಗರ, ಮಾದನಹಿಪ್ಪರಗಾ ಚಿಂಚೋಳಿ ಬಿ.ಮಡಕಿ ಸೇರಿದಂತೆ ಮೊದಲಾದ ಕಡೆ ಮಳೆಯಿಂದ ಅಸ್ತವ್ಯಸ್ತವಾಗಿದೆ. ತಾಲೂಕಿನ ಆಳಂದ ವಲಯಕ್ಕೆ 27 ಮಿ.ಮೀ, ನಿಂಬರಗಾ ವಲಯಕ್ಕೆ 33 ಮಿ.ಮೀ, ಕೋರಳ್ಳಿ 35 ಮಿ.ಮೀ, ಮಾದನಹಿಪ್ಪರಗಾ 22 ಮಿ.ಮೀ, ಸರಸಂಬಾ 42 ಮಿ.ಮೀ, ನರೋಣಾ 19.5 ಮಿ.ಮೀ, ಖಜೂರಿ 28.3 ಮಿ.ಮೀ. ಮಳೆಯಾಗಿದೆ. ಜೂನ್ ಕೊನೆ ವಾರದವರೆಗೆ ಬಿತ್ತನೆಗೆ ಪೂರಕವಾಗದ ಮಳೆಯಿಂದಾಗಿ ಜುಲೈ 1ರಂದು ಅಲ್ಲಲ್ಲಿ ಸುರಿದ ಮಳೆಯಿಂದ ಹೆಚ್ಚು ಕಡಿಮೆ ಐದು ದಿನಗಳಲ್ಲಿ ಶೇ. 30 ಬಿತ್ತನೆ ನಡೆದಿದೆ.
ಜೂನ್ ತಿಂಗಳಲ್ಲಿ ಶೇ.10, ಜುಲೈ ಆರಂಭದಲ್ಲಿ ಶೇ. 30 ಸೇರಿ ಶೇ. 40 ಬಹುತೇಕ ಬಿತ್ತನೆಯಾಗಿದ್ದು ಮಳೆ ಸುರಿಯುತ್ತಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಇದುವರೆಗೂ ಸುರಿದ ಮಳೆಯಿಂದ ಯಾವುದೇ ಜೀವಹಾನಿ ಸೇರಿದಂತೆ ಮನೆಗಳು ಕುಸಿದು ಬಿದ್ದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದ್ದಾರೆ.